Connect with us

Hi, what are you looking for?

Diksoochi News

ಸಾಹಿತ್ಯ

ಎಚ್ಚೆತ್ತುಕೊಳ್ಳಬೇಕಿದೆ ಕಾಂಗ್ರೆಸ್; ಪಕ್ಷಕ್ಕೆ ಬೇಕಿದೆ ಯುವ ನಾಯಕತ್ವ

2

ಲೇಖಕ : ಶ್ರೇಯಸ್ ಕೋಟ್ಯಾನ್

ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ ಬಿಟ್ಟು ಹೋದದ್ದು ಪಕ್ಷಕ್ಕೆ ಲಾಭವೋ ನಷ್ಟವೋ ಎಂಬ ಚರ್ಚೆ ಉಡುಪಿಯ ರಾಜಕೀಯ ವಲಯದಲ್ಲಿ ಸಾಕಷ್ಟು ಆಗಿದೆ. ಆದರೆ, ಎರಡು ದೋಣಿಯಲ್ಲಿ ಕಾಲು ಇರಿಸಿಕೊಂಡಿದ್ದ ಪ್ರಮೋದ್ ಅವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಇಷ್ಟು ಸಮಯ ಪಕ್ಷದಲ್ಲಿಯೇ ಇಟ್ಟುಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುದು ಇವತ್ತಿನ ಅಗತ್ಯ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಹುಡುಕದೆ ಕಾಂಗ್ರೆಸ್ ಮುಂದಿನ ಚುನಾವಣೆಗೆ ತಯಾರಾಗಲು ಸಾಧ್ಯವಿಲ್ಲ.

ಇವತ್ತಿಗೆ ಜಿಲ್ಲಾ ಕಾಂಗ್ರೆಸ್ ನಲ್ಲಿರುವ ಬಿರುಕು ಹೊರಜಗತ್ತಿಗೆ ತಿಳಿಯದ ವಿಚಾರವೇನು ಅಲ್ಲ. ಆದರೆ ಈ ಬಿರುಕಿಗೆ ನೇರ ಕಾರಣವಾದ ಪ್ರಮೋದ್ ಮಧ್ವರಾಜ್ ಈಗ ಪಕ್ಷದಲ್ಲಿಲ್ಲ. ಹಾಗಾಗಿ ಉಳಿದಿರುವ ನಾಯಕರು ಮತ್ತು ಕಾರ್ಯಕರ್ತರು ಎಲ್ಲವನ್ನೂ ಪುನರ್ ವಿಮರ್ಶಿಸುವ ಅಗತ್ಯವಿದೆ.

Advertisement. Scroll to continue reading.

ಪಕ್ಷದಲ್ಲಿರುವಾಗ ಪ್ರಮೋದ್ ಮಧ್ವರಾಜ್ ತನ್ನ ತನು ಮತ್ತು ಧನ ಎರಡನ್ನೂ ಪಕ್ಷಕ್ಕೆ ಸುರಿದಿದ್ದಾರೆ. ಎಂಎಲ್ಎ ಹಾಗೂ ಮಿನಿಸ್ಟರ್ ಹುದ್ದೆಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಆದರೆ ಪಕ್ಷಕ್ಕೆ ಲಾಭಕ್ಕಿಂತ ಜಾಸ್ತಿ ಇವರು ನಷ್ಟ ತಂದುಕೊಟ್ಟದ್ದು ಸುಳ್ಳಲ್ಲ. ಇದಕ್ಕೆ ಕಾರಣ ಅವರ “ಮನ” ಪಕ್ಷದ ಸಿದ್ಧಾಂತದ ಮೇಲೆ ಸಂಪೂರ್ಣ ಇರಲಿಲ್ಲ.

2018 ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ ಪ್ರಮೋದ್ ಪ್ರೆಸ್ ಕಾನ್ಫರೆನ್ಸ್ ಗಳಲ್ಲಿ ಬಹಿರಂಗವಾಗಿ “ನಾನು ಸೋತದ್ದು ಮೋದಿ ಅಲೆಯಿಂದ” ಎಂಬ ಹೇಳಿಕೆಯನ್ನು ಮುಜುಗರವಿಲ್ಲದೆ ನೀಡುತ್ತಿದ್ದರು. ಇದು ಪರೋಕ್ಷವಾಗಿ ಮೋದಿಯವರಿಗೆ legitimacy ನೀಡುತ್ತಿತ್ತು. ಆದರೆ ನಿಜವಾಗಿ ಪ್ರಮೋದ್ ಸೋಲಲು ಇದೊಂದೇ ಕಾರಣವಲ್ಲ. ಕೇವಲ ತನ್ನ ಸೆಲ್ಫ್ ಫೇಮ್ ನಿಂದ ಚುನಾವಣೆಗಳನ್ನು ಗೆಲ್ಲುತ್ತೇನೆ ಎಂಬ ಅತೀವ ಆತ್ಮವಿಶ್ವಾಸದಿಂದ ಪ್ರಮೋದ್ ಕಾರ್ಯಕರ್ತರನ್ನು ಕಡೆಗಣಿಸಿದರು. ಅವರ ಜೊತೆ ಕಠೋರವಾಗಿ ವರ್ತಿಸಲು ಪ್ರಾರಂಭಿಸಿದರು. ಇದರಿಂದಾಗಿ ಅನೇಕ ಹಿರಿಯ ಕಾರ್ಯಕರ್ತರು ಪಕ್ಷದ ಕಾರ್ಯಚಟುವಟಿಕೆಗಳಿಂದ ಹೊರಗಿರಲು ನಿರ್ಧರಿಸಿದರು. ಪಕ್ಷದ ಸಂಘಟನೆಗೆ ಬಿದ್ದ ಮೊದಲ ಏಟು ಇದು. ಹೊರಗುಳಿದ ಕಾರ್ಯಕರ್ತರು ಇವತ್ತಿಗೂ ಹೊರಗೆ ಇದ್ದಾರೆ. ಇನ್ನು ಪ್ರಮೋದ್ ಮಧ್ವರಾಜ್ ಅವರಿಂದಾಗಿಯೇ ಮುತ್ಸಧಿ ರಾಜಕಾರಣಿಯಾದ ಜಯಪ್ರಕಾಶ್ ಹೆಗ್ಡೆ ಪಕ್ಷ ಬಿಡುವಂತಾಯಿತು. ಅವರ ಜೊತೆ ಬ್ರಹ್ಮಾವರದ ಮತಗಳು ಹೋದವು. ಒಂದಂತೂ ಸತ್ಯ, ವೈಯಕ್ತಿಕ ವರ್ಚಸ್ಸು ಎಷ್ಟೇ ಇದ್ದರೂ ಪಕ್ಷ ಸಂಘಟನೆ ಇಲ್ಲದೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ.

ಭಾರತದಾದ್ಯಂತ ಕಾಂಗ್ರೆಸ್ ಕೇಸರೀಕರಣಕ್ಕೆ ಒಳಗಾಗುತ್ತಿರುವುದು ಹೊಸ ವಿಚಾರವೇನಲ್ಲ. ಇಷ್ಟಿದ್ದರೂ ಉಡುಪಿಯ ಹಿರಿಯ ಕಾಂಗ್ರೆಸ್ ನಾಯಕರುಗಳಾದ ವಿನಯ್ ಕುಮಾರ್ ಸೊರಕೆ ಮತ್ತು ಸಭಾಪತಿಯವರು ತಮ್ಮ ಸಿದ್ಧಾಂತಕ್ಕೆ ಬದ್ಧರಾಗಿ ಉಳಿದಿದ್ದಾರೆ. ಆದರೆ ಉಡುಪಿ ಕಾಂಗ್ರೆಸಿಗೆ ಕೇಸರಿಬಣ್ಣ ಬಳೆಯುವ ಪ್ರಯತ್ನಕ್ಕೆ ಮೊದಲು ಇಳಿದದ್ದು ಪ್ರಮೋದ್ ಮಧ್ವರಾಜ್. ಚುನಾವಣೆ ಪ್ರಚಾರಗಳಿಗೆ ಕೇಸರಿ ಶಾಲು, ಕೋಮು ಸೂಕ್ಷ್ಮ ಸರಕಾರಿ ಕಾರ್ಯಕ್ರಮಗಳಿಗೆ ಗೈರು ಹಾಜರು ಮತ್ತು ಅನೇಕ ವಿಚಾರಗಳಲ್ಲಿ ಮೌನ. ಇದರ ಜೊತೆ ಅವರ ಮಾಡುತಿದ್ದ ಭಾಷಣಗಳು ಅವರಲ್ಲಿ ಯಾವುದೇ ಸೈದಾಂತಿಕ ಬದ್ಧತೆ ಇರಲಿಲ್ಲ ಎಂಬುದನ್ನು ಸ್ಪಷ್ಟ ಗೊಳಿಸುತಿತ್ತು. ದುರಾದೃಷ್ಟ ಎಂದರೆ ಪ್ರಮೋದ್ ಜೊತೆಗಿದ್ದ ಅನೇಕ ಕಾಂಗ್ರೆಸ್ ನಾಯಕರು ಇದೇ ಹಾದಿಯಲ್ಲಿ ಇವತ್ತಿಗೂ ಮುಂದುವರೆಯುತ್ತಿದ್ದಾರೆ. ಇದರಿಂದ ರಾಜಕೀಯ ಪರ್ಯಾಯಕ್ಕಾಗಿ ಕಾಂಗ್ರೆಸನ್ನು ಬೆಂಬಲಿಸುತ್ತಿದ್ದ ಪ್ರಗತಿಪರ ವೋಟುಗಳು ಪಕ್ಷದಿಂದ ದೂರವಾಗಿದೆ.

ಉಡುಪಿಯಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದಾಗ ಜಿಲ್ಲಾ ಕಾಂಗ್ರೆಸ್ ನ ಮೇಲೆ ಬಹು ದೊಡ್ಡ ಜವಾಬ್ದಾರಿ ಇತ್ತು. ಸೆಂಟರ್ ಪಾರ್ಟಿ ಆಗಿರುವುದರಿಂದ ಎರಡೂ ಕಡೆಯವರನ್ನು ಮನವೊಲಿಸಿ ತಕ್ಕಮಟ್ಟಿಗೆ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಕಾಂಗ್ರೆಸ್ ಮಾಡಬಹುದಾಗಿತ್ತು. ಕೆಲ ಹಿರಿಯ ನಾಯಕರು ಮತ್ತು ಕಾರ್ಯಕರ್ತರು ತಮ್ಮ ವೈಯಕ್ತಿಕ ನೆಲೆಯಲ್ಲಿ ಈ ಕುರಿತು ಕೆಲಸ ಮಾಡಿದ್ದಾರೆ. ಆದರೆ ಜಿಲ್ಲಾ ಕಾಂಗ್ರೆಸ್ಸಿನಿಂದ ಒಮ್ಮತದ ಕಾಂಕ್ರೀಟ್ ನಿಲುವು ಹೊರಗೆ ಬರಲಿಲ್ಲ. ಅಂದಿನ ಸೋ ಕಾಲ್ಡ್ ನಾಯಕರಾದ ಪ್ರಮೋದ್ ಮದುವೆಗಳಿಗೆ ಭೇಟಿ ನೀಡುವುದರಲ್ಲಿ ಬಿಸಿ ಇದ್ದರು. ಇದರಿಂದಾಗಿ ಕಾಂಗ್ರೆಸ್ಸಿನ ಬೆಂಬಲ ಬಯಸುತ್ತಿದ್ದ ಮುಸಲ್ಮಾನರು ಪಕ್ಷದ ಮೇಲೆ ನಂಬಿಕೆ ಕಳೆದುಕೊಂಡರು. ಇದು ‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ’ ಉಡುಪಿಯಲ್ಲಿ ಬೇರೂರಲು ಸಹಾಯವಾಯಿತು.

Advertisement. Scroll to continue reading.

ಕಳೆದ ಎರಡು ವರ್ಷಗಳಲ್ಲಿ ಪ್ರಮೋದ್ ಮಧ್ವರಾಜ್ ಪಕ್ಷದ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿರಲಿಲ್ಲ. ಅವಕಾಶ ಸಿಕ್ಕಿದಾಗಲೆಲ್ಲ ಕಾಂಗ್ರೆಸನ್ನು ದೂರುವುದು ಮತ್ತು ಪರೋಕ್ಷವಾಗಿ ಬಿಜೆಪಿಯನ್ನು ಸಮರ್ಥಿಸಿಕೊಳ್ಳುವುದು ನಿಲ್ಲಿಸುತ್ತಿರಲಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ತಾವು ಬಿಜೆಪಿಗೆ ಹೋಗುವ ಬಗ್ಗೆ ಇನ್ನಷ್ಟು ಗೊಂದಲ ಸೃಷ್ಟಿಸುತ್ತಿದ್ದರು. ನೀರಿಗೆ ಕಲ್ಲು ಬಿಸಾಕಿ ಆಳ ನೋಡುವ ಕೆಲಸ ಮಾಡುತ್ತಿದ್ದರು. ಪಕ್ಷವನ್ನು ದುರ್ಬಲಗೊಳಿಸುತ್ತಿದ್ದರು. ಆದರೆ ಜಿಲ್ಲಾ ಕಾಂಗ್ರೆಸ್ ಇದನ್ನು ವಿರೋಧಿಸಲೂ ಇಲ್ಲ ಅವರನ್ನು ಪಕ್ಷದಿಂದ ಕಿತ್ತು ಬಿಸಾಕಲೂ ಇಲ್ಲ. ಇದು ಪಕ್ಷದ ಸಂಘಟನಾತ್ಮಕ ದೌರ್ಬಲ್ಯವನ್ನು ಇಡೀ ಜಿಲ್ಲೆಯ ಮುಂದೆ ಎದ್ದು ತೋರಿಸಿದೆ. ಈಗ ಬಿಜೆಪಿಯಲ್ಲಿರುವ ಪ್ರಮೋದ್ ಮಧ್ವರಾಜ್ ಇದೇ ರೀತಿ ವರ್ತನೆಯನ್ನು ಅಲ್ಲಿ ತೋರಿಸಿದರೆ ಅದರ ಪರಿಣಾಮ ಏನಾಗಬಹುದು ಎಂಬುದು ಒಮ್ಮೆ ಆಲೋಚನೆ ಮಾಡಬೇಕು.

ಒಟ್ಟಿನಲ್ಲಿ ಈಗ ಪ್ರಮೋದ್ ಮಧ್ವರಾಜ್ ಪಕ್ಷದಲ್ಲಿ ಇಲ್ಲ. ಆದರೆ ಮೇಲೆ ಹೇಳಿರುವ ಗುಂಗಿನಿಂದ ಜಿಲ್ಲಾ ಕಾಂಗ್ರೆಸ್ ಇನ್ನೂ ಹೊರಗೆ ಬರಲಿಲ್ಲ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆ ಶಕ್ತಿಯುತವಾಗಿ ಇರಬೇಕು ಅಂದರೆ ಏಕಪಕ್ಷೀಯ ಆಡಳಿತ ಇರಬಾರದು. ವಿರೋಧಪಕ್ಷಗಳು ಬಲಿಷ್ಠವಾಗಿರಬೇಕು. ಹಾಗಾಗಿ ಕಾಂಗ್ರೆಸ್ ಜಿಲ್ಲೆಯಲ್ಲಿ ಮತ್ತೆ ಶಕ್ತಿ ಪಡೆದುಕೊಳ್ಳುವುದು ಉಡುಪಿಯ ಬೆಳವಣಿಗೆಗೆ ಬಹಳ ಮುಖ್ಯ. ಇದಕ್ಕೆ ಕೆಲವು ರಚನಾತ್ಮಕ ಬದಲಾವಣೆಗಳ ಅಗತ್ಯ ಇದೆ.

ಬಿಜೆಪಿಯನ್ನು ಸೋಲಿಸಲು ಅವರದ್ದೇ ಅಸ್ತ್ರವಾದ ಹಿಂದುತ್ವಕ್ಕೆ ಮಣೆ ಹಾಕುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದ ವೋಟುಗಳು ರಾಜಕೀಯ ಸ್ಪೆಕ್ಟ್ರಮ್ ನಲ್ಲಿ ಸಮವಾಗಿ ಹಂಚಿತವಾಗಿದೆ. ಯಾವುದೋ ಒಂದು ಕಡೆ ಬಾಗುವುದರಿಂದ ಇನ್ನೊಂದು ಕಡೆಯ ಮತ ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ ಈ ಬಾರಿಯ ಚುನಾವಣೆಯನ್ನು ಅಭಿವೃದ್ಧಿಯ ಏಕೈಕ ಅಜೆಂಡವನ್ನು ಮುಂದಿಟ್ಟುಕೊಂಡು ಸ್ಪರ್ಧಿಸಬೇಕಾಗಿದೆ. ಖ್ಯಾತ ರಾಜಕೀಯ ತಜ್ಞ ರಾಯ್ ಜೂರ್ ವಾದಿಸುವ ಹಾಗೆ ಕೆಲವು ಸಂದರ್ಭದಲ್ಲಿ ಜನ ತಮ್ಮ ಸೈದ್ಧಾಂತಿಕ ಬದ್ಧತೆಗಳನ್ನು ಮೀರಿ ಉತ್ತಮ ಬೆಳವಣಿಗೆಗಾಗಿ ಮತ ಚಲಾಯಿಸಲು ಮುಂದಾಗುತ್ತಾರೆ.

ಇನ್ನು ರಾಷ್ಟ್ರ, ರಾಜ್ಯ ಮತ್ತು ಜಿಲ್ಲೆ ಮೂರು ಕಡೆಯಲ್ಲಿಯೂ ಕಾಂಗ್ರೆಸ್ ಉತ್ತಮ ನಾಯಕತ್ವದ ಕೊರತೆಯನ್ನು ಅನುಭವಿಸುತ್ತಿದೆ. ಕೊನೆಪಕ್ಷ ಎರಡು ವರ್ಷಗಳ ಹಿಂದೆ ಪ್ರಮೋದ್ ಮಧ್ವರಾಜ್ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಿದ್ದರೆ, ಇವತ್ತಿಗೆ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ನಾಯಕರಾದರೂ ಹುಟ್ಟಿ ಕೊಳ್ಳುತ್ತಿದ್ದರು. ಇರಲಿ, ಈಗಲೂ ಸಮಯ ಮೀರಿಲ್ಲ. ಚುನಾವಣೆಗೆ ಹೆಚ್ಚು ಕಾಲ ಇಲ್ಲದೆ ಇರುವುದರಿಂದ ಜಿಲ್ಲಾ ಕಾಂಗ್ರೆಸ್ ಈಗಲೇ ತಮ್ಮ ಅಭ್ಯರ್ಥಿಯನ್ನು ಅಂತಿಮಗೊಳಿಸಿ ಪಕ್ಷ ಸಂಘಟನೆ ಆರಂಭಿಸಬೇಕು. ದೂರ ಉಳಿದಿರುವ ಎಲ್ಲಾ ಕಾರ್ಯಕರ್ತರನ್ನು ಮತ್ತೆ ಒಗ್ಗೂಡಿಸಬೇಕು. ಕೇವಲ ವ್ಯಕ್ತಿ ಪೂಜೆಗೆ ಸೀಮಿತವಾದ ಅರ್ಥವಿಲ್ಲದ ಫ್ಯಾನ್ ಕ್ಲಬ್ ಗಳು ವಿಸರ್ಜನೆಯಾಗಬೇಕು.

Advertisement. Scroll to continue reading.

ಪ್ರಚಾರದ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕು. ಚುನಾವಣೆ ಸಂದರ್ಭದಲ್ಲಿ ನಡೆಯುವ ಮನೆಮನೆ ಭೇಟಿಯನ್ನು ಇನ್ನಷ್ಟು ಯಶಸ್ವಿಗೊಳಿಸಬೇಕು. ಇದು ಬರೀ ಕಾಟಾಚಾರಕ್ಕೆ ಆಗಬಾರದು. ಹಳೆ ವಿಚಾರ ಮತ್ತು ಹಳೆ ತಂತ್ರಗಳನ್ನು ಮೀರಿ ಹೊರಬರದಿದ್ದರೆ ಯಾವುದೇ ಪ್ರಯೋಜನವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಯುವಕರನ್ನು ಸೆಳೆಯಲು ಒಂದು ಹೊಸ ಯುವ ನಾಯಕತ್ವವನ್ನು ಜಿಲ್ಲಾ ಕಾಂಗ್ರೆಸ್ ಬೆಳೆಸಬೇಕಾಗಿದೆ.

ಶ್ರೇಯಸ್ ಕೋಟ್ಯಾನ್

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!