ನವದೆಹಲಿ : ಅಗ್ನಿಪಥ್ ಕುರಿತಂತೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಸಿಎಪಿಎಫ್‌ಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ‘ಅಗ್ನಿವೀರ್ಸ್’ ನೇಮಕಾತಿಗಾಗಿ ಶೇಕಡಾ 10 ರಷ್ಟು ಹುದ್ದೆಗಳನ್ನು ಕಾಯ್ದಿರಿಸಲು ನಿರ್ಧರಿಸಿದೆ.
ಸಿಎಪಿಎಫ್ (CAPF)ಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ನೇಮಕಾತಿಗಾಗಿ ಅಗ್ನಿವೀರರಿಗೆ ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿ ಮೂರು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲು ಸಚಿವಾಲಯ ನಿರ್ಧರಿಸಿದೆ.
ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ 17 ಮತ್ತು 21 ವರ್ಷದೊಳಗಿನವರ ನೇಮಕಾತಿಗಾಗಿ ಮಹತ್ವಾಕಾಂಕ್ಷೆಯ ಅಗ್ನಿಪಥ್ ಯೋಜನೆಯನ್ನು ಮಂಗಳವಾರ ಕೇಂದ್ರ ಪ್ರಕಟಿಸಿದೆ. ನಾಲ್ಕು ವರ್ಷಗಳ ಅಲ್ಪಾವಧಿಯ ಒಪ್ಪಂದದ ಆಧಾರದ ಮೇಲೆ ಅಗ್ನಿವೀರರನ್ನು ನೇಮಿಸಿಕೊಳ್ಳುವ ಯೋಜನೆ ಇದಾಗಿದ್ದು, ಅಗ್ನಿಪಥ್ ವಿರೋಧಿಸಿ ಈಗಾಗಲೇ ದೇಶದ್ಯಾಂತ ಪ್ರತಿಭಟನೆ ನಡೆಯುತ್ತಿದೆ.
ಉತ್ತರಪ್ರದೇಶ, ಬಿಹಾರ ಹಾಗೂ ತೆಲಂಗಾಣಗಳಲ್ಲಿ ಪ್ರತಿಭಟನೆಯೂ ಹಿಂಸಾತ್ಮಕಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ರೈಲು ಬೋಗಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.