ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ರೈಲು ನಿಲ್ದಾಣದಲ್ಲಿ ಮುಂಬಯಿ ಭಾಗದಿಂದ ಬರುವ ಮತ್ಸ್ಯಗಂಧ ರೈಲು ಕೋವಿಡ್ ಹಿನ್ನೆಲೆಯಲ್ಲಿ ಸಂಚಾರ ನಿಲುಗಡೆಗೊಂಡ ಬಳಿಕ ಮತ್ತೆ ರೈಲು ಆರಂಭಗೊಂಡರೂ ಬಾರಕೂರಿನಲ್ಲಿ ನಿಲುಗಡೆ ಇಲ್ಲದ ಕುರಿತು ಸಾರ್ವಜನಿಕರಿಗೆ ತೀರಾ ತೊಂದರೆಯಾಗುತ್ತಿದೆ ಎಂದು ಇಲ್ಲಿನ ಜನರು ಆಕ್ರೋಶಿತರಾಗಿದ್ದರು.
ಆ ಕುರಿತು ಬಾರಕೂರು ಭಾಗದ ಅನೇಕ ಸಂಘ ಸಂಸ್ಥೆಯವರು ದೇವಾಲಯಗಳ ಮುಖ್ಯಸ್ಥರು ಸಮಾಲೋಚನಾ ಸಭೆಯನ್ನು ಮಾಡಿ ರೈಲ್ವೆ ಇಲಾಖೆಯ ಮುಖ್ಯಸ್ಥರೀಗೆ ಜನಪ್ರತಿನಿಧಿಗಳಿಗೆ ಮನವಿ ನೀಡಲಾಗಿ ಗಮನಸೆಳೆಯಲಾಗಿತ್ತು.
ಕೆಲವು ತಿಂಗಳಾದರೂ ರೈಲು ನಿಲುಗಡೆ ಮಾತ್ರ ಆಗಲೇ ಇಲ್ಲ. ಇಲ್ಲಿನ ಪರಿಸರದ ಹೆಬ್ರಿ , ಸಂತೆಕಟ್ಟೆ , ಕೊಕ್ಕರ್ಣೆ , ಕೋಟ , ತೆಕ್ಕಟ್ಟೆ , ಸಾಲಿಗ್ರಾಮ , ಬ್ರಹ್ಮಾವರ . ಕಲ್ಯಾಣಪುರ ತನಕದ ಪ್ರಯಾಣಿಕರು ಉಡುಪಿ ಅಥವಾ ಕುಂದಾಪುರಲ್ಲಿ ಇಳಿದು ಮನೆ ಸೇರಿಕೊಳ್ಳಲು ಮುಂಬಯಿಂದ ಬಂದ ರೈಲಿನ ಹಣಕ್ಕಿಂತ ದುಪ್ಪಟ್ಟು ಹಣ ನೀಡಿ ಕಾರು ಅಥವಾ ರೀಕ್ಷಾ ಮೂಲಕ ಮನೆ ಸೇರಿಕೊಳ್ಳಬೇಕಾಗಿತ್ತು.
ಹೋರಾಟದ ನೇತೃತ್ವ ವಹಿಸಿದ ಪ್ರಥ್ವಿರಾಜ್ ಶೆಟ್ಟಿ ಸೋಮವಾರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರನ್ನು ಮತ್ತು ಕೊಂಕಣ ರೈಲ್ವೆ ಪ್ರಾದೇಶಿಕ ಮುಖ್ಯಸ್ಥರಾದ ಬಾಲಾ ಸಾಹೇಬ್ ನಿಕಮ್ ರನ್ನು ಭೇಟಿಯಾಗಿ ಸಮಸ್ಯೆಯ ಗಂಭೀರತೆಯನ್ನು ವಿವರಿಸಿದ್ದಾರೆ.
ಬಾರಕೂರಿನ ಜನತೆ ಸಮಾನ ಮನಸ್ಕರು ಸಂಘ ಸಂಸ್ಥೆಯವರು ಸೇರಿ ರೈಲು ರೋಕೊ ಚಳವಳಿ ಮಾಡುವುದಾಗಿ ಎಚ್ಚರಿಸಿದ್ದಾರೆ.
ಬಾರಕೂರು ನಿಲ್ದಾಣ ಪರಿಸರದ ಭೂ ಸಂತೃಸ್ಥ ಸುಮಾರು 500 ಮಂದಿ ಕೊಂಕಣ ರೈಲಿನಲ್ಲಿ ಉದ್ಯೋಗಸ್ಥರಾಗಿದ್ದು ಅವರು ಕೂಡಾ ಉಡುಪಿ ಅಥವಾ ಕುಂದಾಪುರದಿಂದ ಮನೆ ಸೇರುವಂತ ಕಷ್ಟ ಕೂಡಾ ಇದೆ ಎಂದು ವಿವರಿಸಿದರು.
ಸಮಸ್ಯೆಯನ್ನು ಮನಗಂಡ ಅಧಿಕಾರಿಗಳು ಕೂಡಲೇ ಸೂಕ್ತ ವ್ಯವಸ್ಥೆ ಮಾಡಿ ಬಾರಕೂರಿನಲ್ಲಿ ಮತ್ಸ್ಯಗಂಧ ರೈಲು ನಿಲುಗಡೆ ಮಾಡುವುದಾಗಿ ತಿಳಿಸಿದರು.
ಬಾರಕೂರಿನಲ್ಲಿ ನಿಲುಗಡೆಗೊಂಡಲ್ಲಿ ಅನೇಕರ ಬಹು ದಿನದ ಬೇಡಿಕೆ ಈಡೇರಿದಂತಾಗುತ್ತದೆ.
ಹಿಂದೆ ಬೆಂಗಳೂರು ಯಶವಂತ ಪುರ ರೈಲು ಬಾರಕೂರಿನಲ್ಲಿ ನಿಲುಗಡೆ ಇಲ್ಲದಾಗ ರೈಲು ತಡೆ ಮತ್ತು ರೈಲು ರೋಕೋ ಮಾಡಿ ಮತ್ತೆ ನಿಲುಗಡೆಗೊಂಡಿತ್ತು