ಮೈಸೂರು : ನಾಡ ದೇವತೆ ಮಹಿಷಾಸುರ ಮರ್ದಿನಿ ಚಾಮುಂಡೇಶ್ವರಿ ತಾಯಿಗೆ ಆಷಾಢ ಮಾಸದಲ್ಲಿ ವಿಶೇಷ ಪೂಜೆಗೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಕೊರೊನಾ 2 ನೇ ಡೋಸ್ ಪಡೆದಿರಬೇಕು. ಜೊತೆಗೆ ನೆಗೆಟಿವ್ ವರದಿಯ ಪ್ರತಿ ಕಡ್ಡಾಯ ತರಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಹೇಳಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದೆ. ಹೀಗಾಗಿ ಮೈಸೂರು ಜಿಲ್ಲಾಡಳಿತ ಹೊಸ ನಿಬಂಧನೆಗಳನ್ನು ಜಾರಿ ಮಾಡಲು ಮುಂದಾಗಿದೆ.
ಎರಡು ಡೋಸ್ ಕೋವಿಡ್ ಲಸಿಕೆ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಡಳಿತ ತಿಳಿಸಿದೆ. ಒಂದು ವೇಳೆ ಲಸಿಕೆ ಹಾಕಿಸಿಕೊಂಡಿಲ್ಲ ಎಂದರೆ ದರ್ಶನಕ್ಕೆ ಹೋಗುವ 72 ಗಂಟೆ ಒಳಗೆ ಕೋವಿಡ್ ಪರೀಕ್ಷೆ ಮಾಡಿಕೊಂಡು, ನೆಗೆಟಿವ್ ಸರ್ಟಿಫಿಕೇಟ್ ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ.
ಜುಲೈ 1 ರಿಂದ ಆಷಾಢ ಮಾಸ ಆರಂಭವಾಗುತ್ತಿದೆ. ಆಷಾಢ ಮಾಸದಲ್ಲಿ ಚಾಮುಂಡಿ ದೇವಿ ದರ್ಶನಕ್ಕೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ.
ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರದ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಈ ವೇಳೆ ಅಪಾರ ಸಂಖ್ಯೆ ಭಕ್ತರು ಬಂದು ತಾಯಿಯ ದರ್ಶನ ಪಡೆಯಲು ಆಗಮಿಸುತ್ತಾರೆ.