ಬೆಂಗಳೂರು : ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಶಾಲಾ ಪಠ್ಯವನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ಪಠ್ಯಪರಿಷ್ಕರಣೆಯಲ್ಲಿ 7-8 ದೋಷಗಳಿದ್ದು, ಸರಿಪಡಿಸಿ 10 ದಿನದೊಳಗೆ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯವನ್ನು ಹಿಂಪಡೆಯುವುದಿಲ್ಲ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಸಚಿವ ಆರ್. ಅಶೋಕ್, ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯ ಪರಿಷ್ಕರಣೆಯಲ್ಲಿ ಏಳೆಂಟು ಸಣ್ಣ ದೋಷಗಳಿವೆ. ಅವುಗಳನ್ನು ಸರಿಪಡಿಸಿ 10 ದಿನದೊಳಗೆ ವಿದ್ಯಾರ್ಥಿಗಳಿಗೆ ವಿತರಣೆ ಮಾಡುವ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.
ಹಿಂದಿನ ಸಿದ್ದರಾಮಯ್ಯ ಸರ್ಕಾರವಿದ್ದಾಗ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದ್ದ ಪಠ್ಯ ಪರಿಷ್ಕರಣೆಯಲ್ಲಿ 150 ದೋಷಗಳು ಇದ್ದವು. ಆದರೂ ಅವರು ಹೊಸ ಪಠ್ಯ ಮುದ್ರಿಸಿರಲಿಲ್ಲ. ಆ ಬಗ್ಗೆ ಯಾರೂ ಚಕಾರವನ್ನೂ ಎತ್ತಿರಲಿಲ್ಲ. ಇದೀಗ ಅಲ್ಪಸಂಖ್ಯಾತರನ್ನು ಓಲೈಸಿ ಹಿಂದೂಗಳನ್ನು ಕೀಳಾಗಿ ತೋರಿಸಿರುವ ಅಂಶಗಳನ್ನು ಕಿತ್ತು ಹಾಕಿದ್ದರಿಂದ ವಿರೋಧ ಮಾಡಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಇದೇ ವೇಳೆ ಪ್ರೊ.ಜಿ.ಎಸ್.ಮುಡಂಬಡಿತ್ತಾಯ, ಪ್ರೊ.ಬರಗೂರು ರಾಮಚಂದ್ರಪ್ಪ ಹಾಗೂ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಗಳ ಸಮಾಜ ವಿಜ್ಞಾನ ಹಾಗೂ ಕನ್ನಡ ಭಾಷಾ ಪಠ್ಯಗಳ ರಚನೆ, ಪರಿಷ್ಕರಣೆ, ಮರು ಪರಿಷ್ಕರಣೆ ವಿಷಯಗಳಿಗೆ ಸಂಬಂಧಪಟ್ಟಂತೆ ಹೋಲಿಕೆ ಮತ್ತು ವ್ಯತ್ಯಾಸಗಳ ವಿವರವುಳ್ಳ 200ಕ್ಕೂ ಹೆಚ್ಚು ಪುಟಗಳ ಕೈಪಿಡಿ ಬಿಡುಗಡೆ ಮಾಡಿದರು.