ವರದಿ : ಶ್ರೀದತ್ತ ಹೆಬ್ರಿ
ಉಡುಪಿ : ಶಾಸಕ ಕೆ.ಪಿ ನಂಜುಂಡಿ ವಿಶ್ವಕರ್ಮ ಅವರ ನಾಯಕತ್ವದಲ್ಲಿ ವಿಶ್ವಕರ್ಮ ಸಮಾಜ ಹಾಗೂ ಬಿಜೆಪಿ ಪಕ್ಷ ಸಂಘಟನೆ ತೊಡಗಿಕೊಂಡಿದ್ದು ಸಂಘಟನೆ ಬಲಪಡಿಸಿದ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಸದ್ಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತ್ರ ವಿಶ್ವಕರ್ಮ ಸಮಾಜವನ್ನು ಇಬ್ಭಾಗ ಮಾಡಲು ಯತ್ನಿಸುತ್ತಿದ್ದಾರೆ ಮತ್ತು ಭ್ರಷ್ಟಾಚಾರ ಆರೋಪದಲ್ಲಿ ಎಸಿಬಿ ವಿಚಾರಣೆ ಎದುರಿಸುತ್ತಿರುವ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ್ ರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಉಡುಪಿ ಜಿಲ್ಲಾಧ್ಯಕ್ಷ ನೇರಂಬಳ್ಳಿ ರಮೇಶ್ ಆಚಾರ್ ಆರೋಪಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಾಬು ಪತ್ತಾರ್ ಮೂಲಕ ಮಠಗಳಿಗೆ ಅನುದಾನ ನೀಡುವುದಾಗಿ ಆಮಿಷವೊಡ್ಡಿ ದಿನಾಂಕ 24.06.2022ರಂದು ವಿಧಾನಸೌಧದ ಮೂರನೇ ಮಹಡಿಯಲ್ಲಿ ಸಭೆ ನಡೆಸಿ ಸಮಾಜಕ್ಕೆ ಮುಜುಗರ ತಂದಿದ್ದಾರೆ ಎಂದರು.
ಭಾರತೀಯ ಜನತಾ ಪಕ್ಷವು ಶಿಸ್ತಿನ ಪಕ್ಷವಾಗಿದ್ದು, ಅದೇ ಪಕ್ಷದಿಂದ ಶಾಸಕರಾಗಿ ಕೆ.ಪಿ ನಂಜುಂಡಿ ವಿಶ್ವಕರ್ಮ ಅವರು ಇರುವಾಗ ಅವರಿಗೆ ಆಹ್ವಾನ ನೀಡದೆ ಗುಟ್ಟಾಗಿ ಸಭೆ ಮಾಡಿ ಪಕ್ಷಕ್ಕೆ ಹಾಗೂ ಸರಕಾರದ ಶಿಷ್ಟಾಚಾರಕ್ಕೆ ಕಳಂಕ ತಂದಿರುತ್ತಾರೆ ಎಂದು ಅವರು ಆರೋಪಿಸಿದರು.
ಹಾಗಾಗಿ ಜಾತಿ ಜಾತಿ ಒಳಗಿನ ಭಿನ್ನಮತ ಸೃಷ್ಟಿಸಿ ಒಂದು ಸಮುದಾಯವನ್ನು ಛಿದ್ರಗೊಳಿಸಲು ಯತ್ನಿಸುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು. ಮಾತ್ರವಲ್ಲದೆ ಇನ್ನು ಮುಂದಿನ ದಿನಗಳಲ್ಲಿ ಯಾವುದೇ ಸಮಾಜಗಳ ನಡುವೆ ಒಡಕು ಸೃಷ್ಟಿಯಾಗಬಾರದ್ದಾಗಿ ಖಡಕ್ ವಾರ್ನಿಂಗ್ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹಿರಿಯರು ಮಾಡಬೇಕು ಎಂದು ಕೋಟ ರಾಮಕೃಷ್ಣ ಆಚಾರ್ ಹೇಳಿದರು.
ಇದೇ ರೀತಿಯಲ್ಲಿ ಮುಂದುವರಿದಲ್ಲಿ ಕರ್ನಾಟಕ ರಾಜ್ಯದೆಲ್ಲೆಡೆ ಸಚಿವರ ವಿರುದ್ಧ ಪ್ರತಿಭಟನೆಗೆ ಕರೆ ನೀಡಲಾಗುವುದೆಂದು ಯುವಘಟಕದ ಅಧ್ಯಕ್ಷ ಕೋಟ ರಾಮಕೃಷ್ಣ ಆಚಾರ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಗಂಗಾಧರಾಚಾರ್ ಉದ್ದಾಲಗುಡ್ಡೆ, ರುಕ್ಮಿಣಿ ರಮೇಶ್ ಆಚಾರ್, ನಾರಾಯಣ ಆಚಾರ್ ಬೈಂದೂರು, ರೋಶನ್ ಆಚಾರ್ಯ ಕೋಟ ಉಪಸ್ಥಿತರಿದ್ದರು.