ಲಂಡನ್ : ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ಬೆನ್ನಲ್ಲೇ ಹಣಕಾಸು ಸಚಿವ, ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರೊಂದಿಗೆ ಪಾಕಿಸ್ತಾನ ಮೂಲದ ಆರೋಗ್ಯ ಸಚಿವ ಸಾಜಿದ್ ಜಾವಿದ್ ಅವರೂ ರಾಜೀನಾಮೆ ನೀಡಿದ್ದಾರೆ.
ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ, ‘ನಾನು ಸರ್ಕಾರವನ್ನು ತೊರೆಯಲು ದುಃಖಿತನಾಗಿದ್ದೇನೆ’. ಆದರೆ, ‘ಇದೇ ರೀತಿ ಮುಂದುವರಿಯಲು ಸಾಧ್ಯವಿಲ್ಲ’ ಎಂದು ಬರೆದುಕೊಂಡಿದ್ದಾರೆ. ಸರಿಯಾಗಿ, ಸಮರ್ಥವಾಗಿ ಹಾಗೂ ಗಂಭೀರವಾಗಿ ಸರಕಾರವನ್ನು ಮುನ್ನಡೆಸಬೇಕು ಎಂದು ಜನ ನಿರೀಕ್ಷಿಸುತ್ತಾರೆ. ಆದರೆ, ಇಂತಹ ಸಂದರ್ಭದಲ್ಲಿ ಹಣಕಾಸು ಸಚಿವನಾಗಿ ಮುಂದುವರಿಯಲು ಆಗುತ್ತಿಲ್ಲ. ಹಾಗಾಗಿ, ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹಂಚಿಕೊಂಡಿದ್ದಾರೆ. ಸಾಜಿದ್ ವಾಜಿದ್ ಕೂಡ ಈ ಬಗ್ಗೆ ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ಈ ಬೆಳವಣಿಗೆ ನಂತರ ಯುಕೆ ಕ್ಯಾಬಿನೆಟ್ ಮುಖ್ಯಸ್ಥ ಸ್ಟೀವ್ ಬಾರ್ಕ್ಲೇ ಅವರನ್ನು ಹೊಸ ಆರೋಗ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಯುಕೆ ಶಿಕ್ಷಣ ಕಾರ್ಯದರ್ಶಿ ನಾಧಿಮ್ ಜಹಾವಿ ಅವರನ್ನು ಹೊಸ ಹಣಕಾಸು ಸಚಿವರಾಗಿ ನೇಮಿಸಲಾಗಿದೆ ಎಂದು ತಿಳಿದುಬಂದಿದೆ.

