ವರದಿ : ಬಿ.ಎಸ್.ಆಚಾರ್ಯ
ಶೃಂಗೇರಿ : ಕೊಂಕಣಿ ಖಾರ್ವಿ ಸಮಾಜ ಗುರುವಂದನ ಸಮಿತಿ, ಇದರ ಮುಂದಾಳತ್ವದಲ್ಲಿ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಮತ್ತು ಮಂಗಳೂರು ಜಿಲ್ಲೆಯಲ್ಲಿ ನೆಲೆಸಿರುವ ಸಮಸ್ತ ಕೊಂಕಣಿ ಖಾರ್ವಿ ಸಮಾಜದ ಬಂಧುಗಳಿಂದ ಶನಿವಾರ ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಹಾಗೂ ತತ್ಕರಕಮಲ ಸಂಜಾತರಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಪವಿತ್ರ ಚಾತುರ್ಮಾಸ್ಯ ವ್ರತಾಚರಣೆಯ ಪವಿತ್ರ ಸಂದರ್ಭದಲ್ಲಿ ಸಾಮೂಹಿಕವಾಗಿ ಗುರುವಂದನೆ ಕಾರ್ಯಕ್ರಮ ಗುರುಪೀಠದ ಕುಂದಾಪುರ ಪ್ರಾಂತೀಯ ಧರ್ಮಾಧಿಕಾರಿ ವೆ| ಮೂ| ಲೋಕೇಶ ಅಡಿಗರು ಮತ್ತು ಉಡುಪಿ ಪ್ರಾಂತೀಯ ಧರ್ಮಾಧಿಕಾರಿ ವೆ| ಮೂ| ವಾಗೀಶ ಶಾಸ್ತ್ರಿಯವರ ಮಾರ್ಗದರ್ಶನದಲ್ಲಿ ನೆರವೇರಿತು.
ಗಂಗೊಳ್ಳಿ, ಕಂಚುಗೋಡು, ತ್ರಾಸಿ, ಕುಂದಾಪುರ, ಮದ್ದುಗುಡ್ಡೆ, ಕುಂದಾಪುರ ಕೋಡಿ, ಬಸ್ರೂರು, ಕೋಡಿ ಕನ್ಯಾಣ, ಸಾಸ್ತಾನ ಕೋಡಿತಲೆ, ಕೋಡಿಬೆಂಗ್ರೆ, ಮಲ್ಪೆ ಪಡುಕರೆ, ಮಂಗಳೂರು ಬೆಂಗ್ರೆ, ಬೆಂಗಳೂರು ಭಾಗದ ಸಾವಿರಕ್ಕೂ ಹೆಚ್ಚು ಸಮಾಜ ಬಾಂಧವರು ಪಾಲ್ಗೊಂಡರು.
ಸ್ವಾಮೀಜಿಯವರು ತಮ್ಮ ಸಂದೇಶದಲ್ಲಿ, ಸನಾತನವಾದ ಹಿಂದೂ ಧರ್ಮಾಚರಣೆಯ ಜೀವನ ಕ್ರಮವನ್ನು ಎಲ್ಲರೂ ಶೃದ್ಧೆಯಿಂದ ಅನುಸರಿಸಬೇಕು. ಮದುವೆಯ ಆಖ್ಯಾನವನ್ನು ವಿವರಿಸಿ, ಮದುವೆ ಮುಂತಾದ ಧಾರ್ಮಿಕ ಆಚರಣೆಯಲ್ಲಿ ಸಾತ್ವಕವಾದ ಆಹಾರ ಪದ್ಧತಿಯನ್ನು ಕಡ್ಡಾಯವಾಗಿ ಸ್ವೀಕರಿಸಬೇಕು ಎಂದು ಆದೇಶಿಸಿದರು.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಸಮಿತಿಯ ಅಧ್ಯಕ್ಷ ಬಿ. ಮಾಧವ ಖಾರ್ವಿ ಬ್ರಹ್ಮಾವರ, ಉಪಾಧ್ಯಕ್ಷ ನಾಗಪ್ಪಯ್ಯ ಪಟೇಲ್ ಗಂಗೊಳ್ಳಿ, ಭೋಜ ಖಾರ್ವಿ ಮಂಗಳೂರು ಮತ್ತು ಕಾರ್ಯದರ್ಶಿ ಸುರೇಶ ಖಾರ್ವಿ ಕೋಡಿ ತಿಳಿಸಿದ್ದಾರೆ.