ಕೋಲ್ಕತ್ತಾ: ಸಿಐಎಸ್ಎಫ್ ಅಧಿಕಾರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಸಿಐಎಸ್ಎಫ್ ಸಬ್ಇನ್ಸ್ಪೆಕ್ಟರ್ ಪಂಕಜ್ ಕುಮಾರ್ ಮೃತ ಅಧಿಕಾರಿ.
ಶುಕ್ರವಾರ ರಾತ್ರಿ 7.45ರ ಸುಮಾರಿನಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಗೆಂದೇ ಮೀಸಲಾದ ನೆಲಮಾಳಿಗೆಯ ಶೌಚಾಲಯದಲ್ಲಿ ಅಧಿಕಾರಿಯ ಶವ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ.
ಪಂಕಜ್ ಕುಮಾರ್ ಶೌಚಾಲಯಕ್ಕೆ ತೆರಳಿದಾಗ ಗುಂಡು ಹಾರಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಸದ್ದು ಕೇಳಿದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಶೌಚಾಲಯಕ್ಕೆ ಧಾವಿಸಿದ್ದಾರೆ. ಈ ವೇಳೆ ಪಂಕಜ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರು ಹಣೆಯ ಮೇಲೆ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ವೀಸ್ ಪಿಸ್ತೂಲ್ ಶವದ ಪಕ್ಕದಲ್ಲಿ ಬಿದ್ದಿರುವುದು ಕಂಡುಬಂದಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ತನಿಖೆ ಮುಂದುವರೆದಿದೆ.