ನವದೆಹಲಿ : ಸಿಡಬ್ಲ್ಯೂಜಿ ಉದ್ಘಾಟನಾ ಸಮಾರಂಭದಲ್ಲಿ ಪಿ.ವಿ.ಸಿಂಧು ಭಾರತದ ಧ್ವಜಧಾರಿಯಾಗಲಿದ್ದಾರೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಬುಧವಾರ ಖಚಿತ ಪಡಿಸಿದೆ.
ಎರಡು ಬಾರಿ ಒಲಿಂಪಿಕ್ ಪದಕ ಗೆದ್ದಿರುವ ಪಿ.ವಿ.ಸಿಂಧು ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುವ ಕಾಮನ್‌ವೆಲ್ತ್ ಗೇಮ್ಸ್ 2022ರ ಉದ್ಘಾಟನಾ ಸಮಾರಂಭಕ್ಕೆ ಭಾರತೀಯ ತಂಡದ ಧ್ವಜಧಾರಿಯಾಗಿ ಆಯ್ಕೆ ಮಾಡಲಾಗಿದೆ. ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 2018ರ ಕಾಮನ್ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಸಿಂಧು ಧ್ವಜಧಾರಿಯಾಗಿದ್ದರು.
ಆ ಆವೃತ್ತಿಯಲ್ಲಿ ಅವರು ಮಹಿಳಾ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ), ‘ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಅವರನ್ನು ಉದ್ಘಾಟನಾ ಸಮಾರಂಭದಲ್ಲಿ ಟೀಮ್ ಇಂಡಿಯಾದ ಧ್ವಜಧಾರಿ ಎಂದು ಘೋಷಿಸಲು ಸಂತೋಷವಾಗಿದೆ’ ಎಂದಿದೆ.
ಕಾಮನ್‌ವೆಲ್ತ್ ಗೇಮ್ಸ್ ಜುಲೈ 28 ರಿಂದ ಇದನ್ನು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭಗೊಳ್ಳಲಿದೆ. ಈ 22ನೇ ಆವೃತ್ತಿಯು ಜುಲೈ 28 ರಂದು ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದೆ. ಒಟ್ಟು 72 ರಾಷ್ಟ್ರಗಳು ಕಾಮನ್‌ವೆಲ್ತ್ ಗೇಮ್ಸ್‌ನ ಸದಸ್ಯರಾಗಿದ್ದಾರೆ. ಈ ಎಲ್ಲಾ ದೇಶಗಳ ಒಟ್ಟು 5,000 ಕ್ಕೂ ಹೆಚ್ಚು ಆಟಗಾರರು ವಿವಿಧ ಕ್ರೀಡೆಗಳಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ.