ಮಂಗಳೂರು : ಸುರತ್ಕಲ್‌ನಲ್ಲಿ ನಡೆದ ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷ್ನರ್ ಶಶಿಕುಮಾರ್ ಹೇಳಿದ್ದಾರೆ. ಸುದ್ದಿಗೋಷ್ಟಿ ನಡೆಸಿ ಮಾತಾನಾಡಿದ ಅವರು, ಕಳೆದ ಗುರುವಾರ ಸುರತ್ಕಲ್‌ನಲ್ಲಿ ಅಂಗಡಿ ಮುಂದೆ ನಿಂತಿದ್ದ ಫಾಜಿಲ್‌ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದರು. ಪ್ರಕರಣದ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಮುಂಜಾನೆ ಉಡುಪಿಯ ಉದ್ಯಾವರದಲ್ಲಿ ಬಂಧಿಸಲಾಗಿದೆ.
ಸುಹಾಸ್ ಶೆಟ್ಟಿ, ಮೋಹನ್ , ಗಿರಿಧರ್, ಅಭಿಷೇಕ್, ದೀಕ್ಷಿತ್, ಶ್ರೀನಿವಾಸ್ ಬಂಧಿತ ಆರೋಪಿಗಳು. ಇವರೆಲ್ಲಾ ಪರಿಚಯಸ್ಥರಲ್ಲ. ಸುಹಾಸ್ ಹಾಗೂ ಅಭಿಷೇಕ್ ಸ್ನೇಹಿತರಾಗಿದ್ದು,ಈ ಮೂಲಕ ಉಳಿದವರ ಪರಿಚಯವಾಗಿದೆ. ಬಜ್ಪೆಯ ಸುಹಾಸ್ ಶೆಟ್ಟಿ ಆಭಿಷೇಕ್ ಗೆ ಜು.26 ರಂದು ಕರೆ ಮಾಡಿ ಯಾರನ್ನಾದರೂ ಹೊಡೆಯಬೇಕು ಎಂದು ಮಾತುಕತೆ ನಡೆಸಿದ್ದಾರೆ. ಈ ವೇಳೆ ಉಳಿದ ನಾಲ್ವರು ಪರಿಚಯವಾಗಿದ್ದಾರೆ. ಜು.27 ರಂದು ಕೊಲೆಗೆ ಸಂಚು ರೂಪಿಸುತ್ತಾರೆ. ಸುಹಾಸ್ ಶೆಟ್ಟಿ, ಗಿರಿಧರ್, ಮೋಹನ್ ನಡುವೆ ಯಾರನ್ನು ಹೊಡೆಯುವುದು ಎಂದು ಚರ್ಚೆ ನಡೆಯುತ್ತದೆ.
ಜು.28 ರಂದು ಅಲೋಷಿಯಸ್ ಪ್ರೈಮರಿ ಸ್ಕೂಲ್ ಬಳಿ ಸೇರಿಕೊಂಡು, ಮಹಮ್ಮದ್ ಫಾಜಿಲ್‌ನನ್ನು ಹೊಡೆಯುವುದೆಂದು ನಿರ್ಧರಿಸುತ್ತಾರೆ.
ಬಳಿಕ 34 ವರ್ಷದ ಅಜಿತ್ ಕ್ಯಾಸ್ಟ್ರ ಎಂಬವರಿಗೆ ಹಣದ ಆಮಿಷವೊಡ್ಡಿ ಕಾರು ಬಾಡಿಗೆ ಪಡೆದು, ಫಾಜಿಲ್‌ನನ್ನು ಹತ್ಯೆ ಮಾಡಿದ್ದಾರೆ. ಬಳಿಕ ಇನ್ನಾದಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದರು ಎಂದು ಕಮಿಷ್ನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಹಂತಕರು ಟಾರ್ಗೆಟ್ ಮಿಸ್ ಮಾಡಿಲ್ಲ. ಆರೋಪಿಗಳಿಗೆ ಕೆಲವರೊಂದಿಗೆ ದ್ವೇಷವಿತ್ತು. 7 ಮಂದಿಯ ಲಿಸ್ಟ್ ಮಾಡಿದ್ದರು. ಅದರಲ್ಲಿ ಫಾಜಿಲ್‌ನನ್ನು ಹತ್ಯೆಗೈಯ್ಯುವುದೆಂದು ನಿರ್ಧರಿಸಿ ಕೊಲೆ ಮಾಡಿದ್ದಾರೆ. ಇನ್ನು ಕೃತ್ಯದ ಬಗ್ಗೆ ವಿಚಾರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.