ಯುಪಿ : ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದಕ್ಕಾಗಿ ಅತ್ತೆ, ಮಾವ, ಗಂಡನಿಂದ ಕಿರುಕುಳ ತಾಳಲಾರದೇ ಭಾರತೀಯ ಮಹಿಳೆಯೊಬ್ಬರು ಅಮೇರಿಕಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂದೀಪ್ ಕೌರ್ ಆತ್ಮಹತ್ಯೆ ಮಾಡಿಕೊಂಡವರು
ಅವರು ಸಾಯುವ ಮುನ್ನ ತಾನು ಅನುಭವಿಸಿದ ಕಷ್ಟಗಳನ್ನು ವಿಡಿಯೋದಲ್ಲಿ ಹೇಳಿಕೊಂಡಿದ್ದು, ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
‘ಮುಂದೊಂದು ನನ್ನ ಪತಿ ಅರ್ಥಮಾಡಿಕೊಂಡಾನು ಎಂಬ ನಿರೀಕ್ಷೆಯಲ್ಲಿ ಇಲ್ಲಿಯವರೆಗೆ ಅವನ ಹಿಂಸೆಯನ್ನು ಸಹಿಸಿಕೊಂಡೆ’ ಎಂದು ಮಂದೀಪ್ ಹೇಳಿದ್ದಾರೆ.
‘ಕಳೆದ ಎಂಟು ವರ್ಷಗಳಿಂದ ಅವನಿಂದ ಏಟು ತಿನ್ನುತ್ತಿದ್ದೇನೆ, ಹಿಂಸೆ ಸಹಿಸಿಕೊಂಡಿದ್ದೇನೆ, ಇನ್ನು ನನ್ನ ಕೈಲಾಗದು’ ಎಂದಿದ್ದಾರೆ. ಪಂಜಾಬಿ ಭಾಷೆಯಲ್ಲಿ ಮಾತಾಡಿರುವ ಅವರು ತನ್ನ ಪತಿ ಮತ್ತು ಅತ್ತೆ-ಮಾವಂದಿರನ್ನು ದೂಷಿಸಿದ್ದು ಅವರೇ ಆತ್ಮಹತ್ಯೆ ಮಾಡಿಕೊಂಡು ಸಾಯುವಂತೆ ಬಲವಂತ ಮಾಡಿದ್ದಾರೆ ಎಂದು ಹೇಳಿದ್ದಾರೆ. ‘ಡ್ಯಾಡಿ ನಾನು ಸಾಯುತ್ತಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ,’ ಎಂದು ಅವರು ರೋದಿಸಿದ್ದಾರೆ.
ಉತ್ತರ ಪ್ರದೇಶದ ಬಿಜನೂರ್ ನವರಾಗಿದ್ದ ಮಂದೀಪ್ 2015 ರಲ್ಲಿ ರಂಜೋಧ್ಬೀರ್ ಸಿಂಗ್ ಸಂಧುರನ್ನು ಮದುವೆಯಾಗಿ ಅಮೆರಿಕಾಗೆ ತೆರಳಿದರು. ಬಿಜನೂರ್ ನಲ್ಲಿರುವ ಅವರ ಕುಟುಂಬದ ಸಹ ಮಂದೀಪ್ ಅನುಭವಿಸುತ್ತಿದ್ದ ಹಿಂಸೆ ಒಂದು ದಿನ ಕೊನೆಗೊಂಡೀತು ಎಂಬ ನಿರೀಕ್ಷೆಯಲ್ಲಿದ್ದರಂತೆ.
ಸಂಧು ತನ್ನ ಮೇಲೆ ಹಿಂಸಾಚಾರ ನಡೆಸುತ್ತಿದ್ದ ವಿಡಿಯೋಗಳನ್ನು ಮಂದೀಪ್ ಭಾರತದಲ್ಲಿರುವ ತನ್ನ ಗೆಳತಿಯರಿಗೆ ಫಾರ್ವರ್ಡ್ ಮಾಡಿದ್ದಾರೆ. ಒಂದು ವಿಡಿಯೋನಲ್ಲಿ ಅವರ ಪುಟಾಣಿ ಮಕ್ಕಳು ಹೆದರಿಕೆಯಿಂದ ಅಳುವುದು ಕಿರುಚುವುದು ಕೇಳಿಸುತ್ತದೆ. ಮತ್ತೊಂದು ವಿಡಿಯೋನಲ್ಲಿ ಅವರು ಪತಿಗೆ ಸವಾಲು ಹಾಕಿ ಪ್ರತ್ಯುತ್ತರ ನೀಡುವುದು ಕೇಳಿಸುತ್ತದೆ. ಆದರೆ ಅವನು ಆಕೆಗೆ ಹೊಡೆಯುವುದನ್ನು ಮುಂದುವರೆಸಿ ತಪ್ಪಾಯ್ತು, ಕ್ಷಮಿಸಿ ಅಂತ ಹೇಳುವರೆಗೆ ಹೊಡೆಯುತ್ತಾನೆ.
ವಿಡಿಯೋನಲ್ಲಿ ಅವರು ತನ್ನನ್ನು 5 ದಿನಗಳವರೆಗೆ ಬಂಧಿಯಾಗಿಸಿದ ಬಳಿಕ ತನ್ನ ತಂದೆ ಪ್ರತಿಕ್ರಿಯಿಸಿದ ಬಗ್ಗೆ ಹೇಳಿದ್ದಾರೆ. ‘ಅವನ ವಿರುದ್ಧ ನನ್ನ ತಂದೆ ಪೊಲೀಸ್ ಕೇಸ್ ದಾಖಲಿಸಿದರು. ಆದರೆ ಅವನು ನನ್ನಲ್ಲಿಗೆ ಬಂದು ತನ್ನನ್ನು ಕಾಪಾಡುವಂತೆ ಗೋಗರೆದ. ನಾನು ಅವನನ್ನು ಕ್ಷಮಿಸಿಬಿಟ್ಟೆ. ಅವನಿಗೆ ವಿವಾಹೇತರ ಸಂಬಂಧಗಳು ಇದ್ದವು, ಕೇಳಿದರೆ ಹಿಂಸೆ ನೀಡುವುದನ್ನು ಜಾಸ್ತಿ ಮಾಡುತ್ತಿದ್ದ ಅನ್ನುವ ಕಾರಣಕ್ಕೆ ನಾವು ಸುಮ್ಮನಿದ್ದೆವು,’ ಎಂದು ಮಂದೀಪ್ ಹೇಳಿದ್ದಾರೆ.
ಮಂದೀಪ್ಗೆ 6 ಮತ್ತು 4 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮಕ್ಕಳು ಹೆಣ್ಣಾಗಿ ಹುಟ್ಟಿದ್ದಾರೆ ಎಂಬ ಕಾರಣಕ್ಕೆ ಗಂಡ ದಿನನಿತ್ಯ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಮಂದೀಪ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. ಆಗಸ್ಟ್ 4ರಂದು ಮಂದೀಪ್ ಆತ್ಮಹತ್ಯೆಗೆ ಶರಣಾಗಿದ್ದಾರೆ.