ಉಡುಪಿ : ಪ್ರತೀ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪು ಮಂದಿಯಲ್ಲೊಂದು ಕುತೂಹಲ. ರವಿ ಕಟಪಾಡಿ ಯಾವ ವೃಷ ತೊಟ್ಟಿದ್ದಾರೆ ಎಂಬುದು. ಹೌದು, ಸಮಾಜ ಸೇವೆಗಾಗಿ ತನ್ನ ಜೀವ ಮುಡಿಪಾಗಿಟ್ಟಿರುವ ಬಡವರ ಬಂಧು ರವಿ ಕಟಪಾಡಿ ಅಷ್ಟಮಿಯಂದು ವೇಷ ಧರಿಸಿ, ಅದರಿಂದ ಸಂಗ್ರಹವಾಗುವ ಹಣವನ್ನು ಅನಾರೊಗ್ಯ ಪೀಡಿತರಿಗೆ ನೀಡುವ ಪರಿಪಾಠ ಹೊಂದಿದ್ದಾರೆ.
ಅವರು ಕಳೆದ ಏಳು ವರ್ಷಗಳಿಂದ ವೇಷ ಧರಿಸಿ ಒಟ್ಟು 89.75 ಲಕ್ಷ ರೂ. ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಿದ್ದು, ಈ ಹಣವನ್ನು ಈವರೆಗೆ ಒಟ್ಟು 66 ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ವಿನಿಯೋಗಿಸಲಾಗಿದೆ. ಈ ಬಾರಿ 10 ಲಕ್ಷ ರೂ. ಹಣ ಸಂಗ್ರಹಿಸುವ ಮೂಲಕ ಒಟ್ಟು ಒಂದು ಕೋಟಿ ರೂ. ಗುರಿ ತಲುಪುವ ಯೋಜನೆ ಹಾಕಿಕೊಂಡಿದ್ದಾರಂತೆ ಅವರು.
ಈ ಬಾರಿಯ ವೇಷಕ್ಕೆ ಹೈದರಬಾದ್, ಮಂಗಳೂರು, ಮಡಿಕೇರಿ, ಕಟಪಾಡಿಯ ಒಟ್ಟು ಏಳು ಮಂದಿ ಕಲಾವಿದರು ವೇಷಕ್ಕಾಗಿ ಕಳೆದ ಒಂದು ತಿಂಗಳುಗಳಿಂದ ಸಿದ್ಧತೆ ನಡೆಸುತ್ತಿದ್ದಾರೆ.
ಈ ಬಾರಿ ಸಂಗ್ರಹವಾದ ಹಣವನ್ನು ಕಟಪಾಡಿ ಪೇಟೆಬೆಟ್ಟು ಬಬ್ಬುಸ್ವಾಮಿ ದೈವಸ್ಥಾನ ಮತ್ತು ಕೊರಗಜ್ಜ ಸನ್ನಿಧಾನದಲ್ಲಿ ಅನಾರೋಗ್ಯ ಪೀಡಿತ ಕುಂದಾಪುರ, ಕಾರ್ಕಳ, ಮುಲ್ಕಿ, ಹೆಬ್ರಿ, ಕಟಪಾಡಿ, ಕಾಪುವಿನ ಒಟ್ಟು ಆರು ಮಕ್ಕಳ ಚಿಕಿತ್ಸೆಗೆ ನೀಡುವ ಗುರಿ ಹೊಂದಿದ್ದಾರೆ.