ತಮಿಳುನಾಡು : ಇತ್ತೀಚೆಗಿನ ದಿನಗಳಲ್ಲಿ ಮದುವೆಗಳು ವಿಭಿನ್ನ ಮಾದರಿಗಳಲ್ಲಿ ನಡೆಯುತ್ತವೆ. ವಧು – ವರರು ಮಂಟಪಕ್ಕೆ ಬರುವುದು ವಿಭಿನ್ನವಾಗಿರುತ್ತದೆ. ಜೊತೆಗೆ ಆಮಂತ್ರಣ ಪತ್ರಿಕೆಗಳು ವಿಭಿನ್ನ ಶೈಲಿಯಲ್ಲಿರುತ್ತವೆ. ಇದೀಗ ತಮಿಳನಾಡಿನಲ್ಲಿ ಟ್ಯಾಬ್ಲೆಟ್(ಮಾತ್ರೆ) ಕಾರ್ಡ್ ಮಾದರಿಯ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ.
ಇಂತಹದ್ದೊಂದು ವಿಭಿನ್ನ ಆಮಂತ್ರಣ ಪತ್ರಿಕೆ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಮುದ್ರಣವಾಗಿದ್ದು, ವರ ಫಾರ್ಮಾಸಿಸ್ಟ್, ವಧು ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ಜೋಡಿ ಆಹ್ವಾನ ಪತ್ರಿಕೆಗೆ ಟ್ಯಾಬ್ಲೆಟ್ ಕಾರ್ಡ್ ಮಾದರಿ ಬಳಸಿದ್ದಾರೆ.
ತಿರುವಣ್ಣಾಮಲೈ ಜಿಲ್ಲೆಯ ಎಜಿಲರಸನ್ ಮತ್ತು ವಿಲ್ಲುಪುರಂ ಜಿಲ್ಲೆಯ ಗೆಂಜಿಯ ವಸಂತಕುಮಾರಿ ಅವರ ಮದುವೆ 2022ರ ಸೆಪ್ಟೆಂಬರ್ 5ರಂದು ನಡೆಯಲಿದೆ. ಎಲ್ಲ ಸ್ನೇಹಿತರು ಮತ್ತು ಬಂಧುಗಳು ತಪ್ಪದೇ ವಿವಾಹ ಸಮಾರಂಭಕ್ಕೆ ಆಗಮಿಸಬೇಕು ಎಂದು ಬರೆಯಲಾಗಿದೆ. ಅಷ್ಟೇ ಅಲ್ಲ, ನೀಲಿ ಬಣ್ಣದಲ್ಲಿ ಮದುವೆ ಮತ್ತು ಆರತಕ್ಷತೆ ನಡೆಯುವ ದಿನಾಂಕ ಮತ್ತು ಸಮಯ ಬರೆಯಲಾಗಿದೆ. ಮ್ಯಾನುಫ್ಯಾಕ್ಚರ್ ವಿಭಾಗದಲ್ಲಿ ವರನ ತಂದೆ-ತಾಯಿ, ವಧುವಿನ ತಂದೆ-ತಾಯಿ ಹೆಸರಿನೊಂದಿಗೆ ಅವರ ವಿಳಾಸ ಇದೆ.
ಟ್ಯಾಬ್ಲೆಟ್ ಕಾರ್ಡ್‌ಗಳಲ್ಲಿ ಸೂಚಿಸುವ ವಾರ್ನಿಂಗ್ ಸ್ಥಳದಲ್ಲಿ ‘ಎಲ್ಲ ಸ್ನೇಹಿತರೇ, ಬಂಧುಗಳೇ ನಮ್ಮ ಮದುವೆಯ ಶುಭಕಾರ್ಯಕ್ರಮಕ್ಕೆ ಮಿಸ್ ಮಾಡದೆ ಬನ್ನಿ’ ಎಂದು ಕೆಂಪು ಬಣ್ಣದಲ್ಲಿ ಮುದ್ರಿತವಾಗಿದೆ. ಇನ್ನು ತಮ್ಮ ಮದುವೆ ದಿನದ ವಿಶೇಷ ದಿನಗಳನ್ನೂ ಸ್ಮರಿಸಿದ್ದಾರೆ. ಅಂದು ಶಿಕ್ಷಕರ ದಿನ ಮತ್ತು ಮದರ್ ತೆರೇಸಾ ಸ್ಮರಣೆ ದಿನವಿದೆ. ಮದುವೆ ಕರೆಯೋಲೆ ಪತ್ರಿಕೆಯಲ್ಲಿ ವಧು-ವರನ ಹೆಸರು ದೊಡ್ಡ ಅಕ್ಷರದಲ್ಲಿದ್ದು, ಪಕ್ಕದಲ್ಲೇ ಇಬ್ಬರ ಶಿಕ್ಷಣದ ವಿವರವೂ ಇದೆ.
ಮಾತ್ರೆ ಶೀಟ್ ಮಾದರಿಯ ಈ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನೆಟ್ಟಿಗರು ಈ ಜೋಡಿಗೆ ಶುಭ ಕೋರುತ್ತಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.