ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ದೇಶದಲ್ಲಿ ಇನ್ನಿತರ ರಾಜ್ಯದಂತೆ ಕರ್ನಾಟಕ ರಾಜ್ಯ ಕ್ರೀಡಾ ಪಟುಗಳಿಗೆ ಆರ್ಥಿಕ ನೆರವು ನೀಡುವುದು ತೀರಾ ಕಡಿಮೆ. ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಪದಕ ವಿಜೇತರಾದ ಗುರುರಾಜ ಪೂಜಾರಿ ಹೇಳಿದರು.
ಸೋಮವಾರ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜರುಗಿದ ಕ್ರೀಡಾ ಪಟುಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ೧೮ ವರ್ಷದಿಂದ ಮೇಜರ್ ಧ್ಯಾನ್ ಚಂದ್‌ರವರ ನೆನಪಿನಲ್ಲಿ ನಡೆಯುವ ಕ್ರೀಡಾ ದಿನಾಚರಣೆಯಲ್ಲಿ ಸಾಧಕ ಕ್ರೀಡಾಪಟುಗಳಿಗೆ ಆರ್ಥಿಕ ನೆರವನ್ನು ನೀಡುವ ಇಂತಹ ಸಂಸ್ಥೆಗಳಿಂದ ಅನೇಕ ಕ್ರೀಡಾ ಪಟುಗಳಿಗೆ ನೆರವಾಗಿದೆ. ಇಂತಹ ಗಂಭೀರ ಸಮಸ್ಯೆಯ ಕುರಿತು ರಾಜ್ಯ ಮುಖ್ಯ ಮಂತ್ರಿಯವರ ಗಮನಕ್ಕೆ ತಂದಾಗ ದೇಹಕ್ಕಾಗಿ ಆಟ ಆಡಿ ದೇಶಕ್ಕಾಗಿ ಅಲ್ಲ ಎಂದಿದ್ದರು ಎಂದು ತೀರಾ ನಿರಾಸೆಯಿಂದ ಮಾತನಾಡಿದರು.
ಈ ಸಂದರ್ಭದಲ್ಲಿ ಗುರುರಾಜ ಪೂಜಾರಿಯವರಿಗೆ ರೂ ೧.೫೧ ಲಕ್ಷ ರೂ ನೆರವನ್ನು ನೀಡಿ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಮತ್ತು ಉಡುಪಿ ಜಿಲ್ಲೆಯಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ೪ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಯಿತು.
ಸಭಾ ಕಾರ್ಯಕ್ರಮದ ಮೊದಲು ಚೇರ್ಕಾಡಿ ಶಾರದಾ ಪ್ರೌಡ ಶಾಲಾ ವಿದ್ಯಾರ್ಥಿಗಳಿಂದ ಯೋಗ ನೃತ್ಯ ಜರುಗಿತು.
ಶಿಕ್ಷಣ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ ಬೆಂಗಳೂರಿನ ವಿ. ಐ .ಪಿ ಹೈಸ್ಕೂಲಿನ ಪ್ರಿನ್ಸಿಪಾಲ್ ಸಾಕಮ್ಮ ಶೆಟ್ಟಿ ಮತ್ತು ಮೂಡಬಿದ್ರೆಯ ಕ್ರೀಡಾ ಅಧಿಕಾರಿ ನಿತ್ಯಾನಂದ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕಿದಿಯೂರು, ಯುವಜನ ಕ್ರೀಡಾ ಇಲಾಖೆಯ ರೋಶನ್ ಕುಮಾರ್ ಶೆಟ್ಟಿ, ಸೀತಾನದಿ ವಿಠಲ ಶೆಟ್ಟಿ, ಇನ್ನಿತರು ಉಪಸ್ಥಿತರಿದ್ದರು.
ಜಯರಾಮ ನಾಯಕ್ ಪ್ರಾರ್ಥಿಸಿ, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವೈ ಚಂದ್ರ ಶೇಖರ ಹೆಗ್ಡೆ ಸ್ವಾಗತಿಸಿ, ಪ್ರಸನ್ನ ಕುಮಾರ್ ಶೆಟ್ಟಿ, ದಿನಕರ ಶೆಟ್ಟಿ, ಜಿ.ಬಿ ಶೆಟ್ಟಿ ಪರಿಚಯಿಸಿ, ಅಶೋಕ ಕುಮಾರ್ ಶೆಟ್ಟಿ ನಿರೂಪಿಸಿ, ಗ್ರೇಗರಿ ಡಿಸಿಲ್ವ ವಂದಿಸಿದರು.