ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ವಿಜ್ಞಾನ ಮನುಷ್ಯನ ಬದುಕಿನಲ್ಲಿ ಬಹು ಮುಖ್ಯವಾದದ್ದು, ಅದನ್ನು ರಂಗಭೂಮಿಯ ಮೂಲಕ ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಪಸರಿಸಿದಾಗ ವೈಜ್ಞಾನಿಕ ಮನೋಭಾವಯುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಜೊತೆಗೆ ಈ ನಾಟಕದ ನೆಪದಲ್ಲಿ ವಿದ್ಯಾರ್ಥಿಗಳೆಲ್ಲ ಜೊತೆಯಾಗುವುದೇ ಒಂದು ಸಂಭ್ರಮ. ಇದು ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಮಣಿಪಾಲ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಜ್ಞಾನ ಶಿಕ್ಷಕ ಮತ್ತು ಜಿಲ್ಲಾ ವಿಜ್ಞಾನ ಸಂಪನ್ಮೂಲ ವ್ಯಕ್ತಿ ನಾಗೇಂದ್ರ ಪೈ ಅವರು ತಿಳಿಸಿದರು.
ಇತ್ತೀಚಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬ್ರಹ್ಮಾವರ ಹಾಗೂ ಎಸ್ಎಂಎಸ್ ಆಂಗ್ಲ ಮಾಧ್ಯಮ ಶಾಲೆ ಬ್ರಹ್ಮಾವರ ಇವರ ಸಹಯೋಗದೊಂದಿಗೆ ಎಸ್ಎಂಎಸ್ ಆಂಗ್ಲ ಮಾಧ್ಯಮ ಶಾಲೆ ಬ್ರಹ್ಮಾವರದಲ್ಲಿ ನಡೆದ ಬ್ರಹ್ಮಾವರ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ನಾಟಕ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ತಿರ್ಪುಗಾರರಾಗಿ ಮಾತನಾಡಿದರು.
ತಾಲೂಕಿನ ಪ್ರೌಢಶಾಲೆಗಳ ಆಯ್ದ ತಂಡಗಳು ಭಾಗವಹಿಸಿದ್ದು, ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರದ ಪ್ರೌಢಶಾಲಾ ವಿಭಾಗ ಪ್ರಥಮ ಸ್ಥಾನವನ್ನು, ಎಸ್ಎಂಎಸ್ ಆಂಗ್ಲ ಮಾಧ್ಯಮ ಶಾಲೆ( ಸಿ.ಬಿ.ಎಸ್.ಇ.) ಬ್ರಹ್ಮಾವರ ದ್ವಿತೀಯ ಸ್ಥಾನವನ್ನು ಮತ್ತು ಬಾಲಕರ ಪ್ರೌಢಶಾಲೆ ಕೋಟ ತೃತೀಯ ಸ್ಥಾನವನ್ನು ಪಡೆದುಕೊಂಡವು.
ವಿಜೇತ ತಂಡಗಳನ್ನು ಬ್ರಹ್ಮಾವರದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ. ನಾಯಕ್ ಅವರು ಪ್ರಮಾಣ ಪತ್ರಗಳನ್ನು ನೀಡಿ ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ಎಸ್ಎಮ್ಎಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಅಭಿಲಾಷ ಎಸ್., ವಿಜ್ಞಾನ ನಾಟಕ ಸ್ಪರ್ಧೆಯ ನೋಡಲ್ ಅಧಿಕಾರಿ ಹಾಗೂ ಪೆರ್ಡೂರು ಹೋಬಳಿಯ ಶಿಕ್ಷಣ ಸಂಯೋಜಕ ಬಿಂದಿಯಾ, ಮಂದಾರ್ತಿ ಹೋಬಳಿಯ ಶಿಕ್ಷಣ ಸಂಯೋಜಕ ರಾಘವ್ ಶೆಟ್ಟಿ, ತೀರ್ಪುಗಾರರಾದಂತಹ ನಾಗೇಂದ್ರ ಪೈ ಮತ್ತು ವನಿತಾ ಶೆಟ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಸ್ತಾವು ಉಪಸ್ಥಿತರಿದ್ದರು.
ಎಸ್ಎಂಎಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಅಭಿಲಾಷ ಎಸ್ ಸ್ವಾಗತಿಸಿ, ಪೆರ್ಡೂರು ಹೋಬಳಿಯ ಶಿಕ್ಷಣ ಸಂಯೋಜಕಿ ಬಿಂದಿಯಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ರವಿ ಕಟ್ಕೆರೆ ನಿರೂಪಿಸಿ, ವಂದಿಸಿದರು.