ಕೊಚ್ಚಿ : ಪ್ರಧಾನಿ ಮೋದಿ ಅವರು ಇಂದು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಸ್ವದೇಶಿ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಲೋಕಾರ್ಪಣೆ ಮಾಡಿದ್ದು, ಇದೇ ವೇಳೆ ಅವರು ನೌಕಾಪಡೆಯ ಹೊಸ ಧ್ವಜವನ್ನು ಅನಾವರಣಗೊಳಿಸಿದ್ದಾರೆ.
ಭಾರತದ ಮಹಾನ್ ಚಕ್ರವರ್ತಿ ಛತ್ರಪತಿ ಶಿವಾಜಿ ಮಹಾರಾಜರ ಮುದ್ರೆಯಿಂದ ಸ್ಫೂರ್ತಿ ಪಡೆದ ಹೊಸ ನೌಕಾ ಧ್ವಜ ಇದಾಗಿದೆ. ವಸಾಹತುಶಾಹಿ ಕುರುಹುಗಳನ್ನು ತೊಡೆದುಹಾಕುವ ಮತ್ತು ಶ್ರೀಮಂತ ಭಾರತೀಯ ಕಡಲ ಪರಂಪರೆಗೆ ಅನುಗುಣವಾಗಿ ನೌಕಾಪಡೆ ಲಾಂಛನವನ್ನು ಬದಲಾವಣೆ ಮಾಡಲಾಗಿದೆ. ಈ ನೌಕಾಧ್ವಜಕ್ಕೆ ʻನಿಶಾನ್ʼ ಎಂದು ಹೆಸರಿಡಲಾಗಿದೆ.
ನೌಕಾ ಧ್ವಜಗಳು ನೌಕಾ ಹಡಗುಗಳು ಅಥವಾ ರಚನೆಗಳು ರಾಷ್ಟ್ರೀಯತೆಯನ್ನು ಸೂಚಿಸುವ ಧ್ವಜಗಳಾಗಿವೆ. ಪ್ರಸ್ತುತ ಭಾರತೀಯ ನೌಕಾ ಧ್ವಜವು ಬಿಳಿ ಬಣ್ಣದಲ್ಲಿದೆ. ಇದರೊಂದಿಗೆ ಲಂಬ ಮತ್ತು ಅಡ್ಡ ಕೆಂಪು ಪಟ್ಟಿಗಳನ್ನು ಹೊಂದಿದೆ. ಇದು ಸೇಂಟ್ ಜಾರ್ಜ್ ಶಿಲುಬೆಯನ್ನು ಸೂಚಿಸುತ್ತದೆ. ಇನ್ನೂ, ಮೇಲಿನ ಮೂಲೆಯಲ್ಲಿ ತ್ರಿವರ್ಣ ಧ್ವಜದ ಚಿತ್ರವಿದೆ. ಅದರಲ್ಲಿ ಅಶೋಕ್ ಚಿಹ್ನೆಯೂ ಇದೆ. ಅದರ ಕೆಳಗೆ ಸತ್ಯಮೇಯ ಜಯತೇ ಎಂದು ಸಹ ಬರೆಯಲಾಗಿದೆ.
ಸ್ವಾತಂತ್ರ್ಯದ ನಂತರ ಭಾರತೀಯ ನೌಕಾ ಧ್ವಜವು ಹಲವಾರು ಬಾರಿ ಬದಲಾಗಿದ್ದು, 2001 ರಲ್ಲಿ ಮಾತ್ರ ಧ್ವಜದಲ್ಲಿದ್ದ ಅಡ್ಡ ಚಿಹ್ನೆಯನ್ನು ತೆಗೆದುಹಾಕಲಾಗಿತ್ತು. 2004 ರಲ್ಲಿ ಮತ್ತೆ ಅಡ್ಡ ಚಿಹ್ನೆಯನ್ನು ಸೇರಿಸಲಾಯಿತು. ಆದರೆ, ಇದೀಗ ಬ್ರಿಟಿಷರ ಕಾಲದ ಸಂಕೇತವಾಗಿರುವ ನೌಕಾಪಡೆಯ ಧ್ವಜದಲ್ಲಿರುವ ಶಿಲುಬೆಯನ್ನು ತೆಗೆದು ಹಾಕಲಾಗಿದೆ.