ಕುಂದಾಪುರ: ಮುರಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಪತಿ ಸಾವನ್ನಪ್ಪಿದ್ದು, ರಕ್ಷಣೆಗೆ ಧಾವಿಸಿದ ಪತ್ನಿಗೂ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಇಬ್ಬರೂ ಸಾವನ್ನಪ್ಪಿದ ದಾರುಣ ಘಟನೆ ಇಲ್ಲಿನ ಹೆಮ್ಮಾಡಿ ಸಮೀಪದ ಸುಳ್ಸೆ ಕರಣಿಕರ ಮನೆಯ ಬಳಿ ನಡೆದಿದೆ.
ಸುಳ್ಸೆ ಯಕ್ಷಿಬ್ರಹ್ಮ ನಂದಿಕೇಶ್ವರ ದೈವಸ್ಥಾನ ಸಮೀಪದ ಸುಳ್ಸೆಯರ ಮನೆ ನಿವಾಸಿ ಮಹಾಬಲ ದೇವಾಡಿಗ (55) ಪತ್ನಿ ಲಕ್ಷ್ಮೀ ದೇವಾಡಿಗ (49) ಮೃತ ದಂಪತಿ.
ಮಹಾಬಲ ದೇವಾಡಿಗ ಸುಳ್ಸೆ ಕರಣಿಕರ ಮನೆಯಲ್ಲಿ ದಿನಗೂಲಿ ಕೆಲಸ ನಿರ್ವಹಿಸುತ್ತಿದ್ದು, ಇಂದು ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಕಳೆದರೂ ಪತಿ ಮನೆಗೆ ಬಾರದಿರುವುದನ್ನು ಗಮನಿಸಿದ ಪತ್ನಿ ಲಕ್ಷ್ಮೀ ಅನುಮಾನಗೊಂಡು ಕರಣಿಕರ ಮನೆಗೆ ತೆರಳಿದ್ದಾರೆ. ಈ ವೇಳೆ ಕರಣಿಕರ ಮನೆಗೆ ಬರುವ ಕಾಲುದಾರಿಯಲ್ಲಿ ತುಂಡರಿಸಿದ ವಿದ್ಯುತ್ ತಂತಿ ತಗುಲಿ ಪತಿ ಬಿದ್ದಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಪತಿಯನ್ನು ರಕ್ಷಿಸಲು ಕೂಗತೊಡಗಿದ್ದಾರೆ. ಆದರೆ, ಸಮೀಪದ ಮನೆಯರು ಬರುವಷ್ಟರಲ್ಲಾಗಲೇ ಮಳೆ ನೀರಿನಿಂದ ಒದ್ದೆಯಾದ ಮರದ ತುಂಡಲ್ಲಿ ರಕ್ಷಣಾ ಕಾರ್ಯಕ್ಕೆ ಲಕ್ಷ್ಮೀ ಮುಂದಾದ ಪರಿಣಾಮ ಅವರಿಗೂ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಹಾಬಲ ದೇವಾಡಿಗ ಅವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಸೌಕೂರಿನ ಪತ್ನಿಯ ಮನೆಯಲ್ಲಿ ವಾಸವಿದ್ದಾರೆ.
ಗುರುವಾರ ತಾವು ಕೆಲಸ ನಿರ್ವಹಿಸುವ ಕರಣಿಕರ ಮನೆಯಲ್ಲಿ ಕೆಲಸ ಮುಗಿಸಿ ತಮ್ಮ ಮನೆಗೆ ವಾಪಾಸಾಗುತ್ತಿದ್ದಾಗ ಈ ದುರಂತ ನಡೆದಿದೆ ಎನ್ನಲಾಗಿದೆ.
ಪತಿಯ ರಕ್ಷಣೆಗೆ ಧಾವಿಸಿದ ಲಕ್ಷ್ಮೀ ಒದ್ದೆ ಮರದ ತುಂಡಲ್ಲಿ ಮುಟ್ಟಬೇಡಿ ಎಂದು ಸ್ಥಳೀಯ ಮಹಿಳೆಯೋರ್ವರು ಹೇಳಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅವರು ಪತಿಯ ರಕ್ಷಣೆಗೆ ಹೋಗಿ ತಮ್ಮ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಸ್ಥಳೀಯರು ತಕ್ಷಣವೇ ಮೆಸ್ಕಾಂ ಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮಾಹಿತಿ ನೀಡಿದ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಮೃತ ಮಹಾಬಲ ದೇವಾಡಿಗ ಹಾಗೂ ಲಕ್ಷ್ಮೀ ದಂಪತಿಗೆ ಇಬ್ಬರು ಮಕ್ಕಳಿದ್ದು, ಓರ್ವ ಪುತ್ರ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪುತ್ರಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದಾಳೆ.
ಮೆಸ್ಕಾಂ ಬೇಜವಾಬ್ದಾರಿ; ಜನಾಕ್ರೋಶ :
ಮೆಸ್ಕಾಂ ಇಲಾಖೆಯ ನಿರ್ಲಕ್ಷವೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾಬಲ ದೇವಾಡಿಗ ಅವರು ಸಾವನ್ನಪ್ಪಿದ ಕಾಲು ದಾರಿಯ ಮಧ್ಯೆ ಎರಡು ವಿದ್ಯುತ್ ತಂತಿ ಹಾದು ಹೋಗಿದೆ. ಅನೇಕ ಕಡೆಗಳಲ್ಲಿ ತುಂಡಾದ ತಂತಿಗಳನ್ನು ಜೋಡಿಸಲಾಗಿದೆ. ಎರಡು ತಂತಿಯಲ್ಲಿ ಒಂದು ತಂತಿ ತುಂಡಾಗಿ ಬಿದ್ದಿದ್ದು, ಇದೇ ತಂತಿ ತಗುಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಮೆಸ್ಕಾಂ ಇಲಾಖೆಯ ನಿರ್ಲಕ್ಷವನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.