ಕೊಚ್ಚಿ : ಗೂಗಲ್ ಮ್ಯಾಪ್ ಮೂಲಕ ಪಯಣ ಬೆಳೆಸಿ ಇಬ್ಬರು ವೈದ್ಯರು ಇಹಲೋಕ ತ್ಯಜಿಸಿರುವ ಘಟನೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ದಾರಿ ಗೊತ್ತಿಲ್ಲವಾದರೆ ಗೂಗಲ್ ಮ್ಯಾಪ್ ಇದೆಯಲ್ಲಾ ಎನ್ನುವವರೇ ಹೆಚ್ಚು…ಆದರೆ, ಈ ಗೂಗಲ್ ಮ್ಯಾಪ್ ಅವಲಂಭಿಸಿ ದಾರಿ ತಪ್ಪಿದವರು, ಪ್ರಾಣಕಳಕೊಂಡವರೂ ಇದ್ದಾರೆ.
ಕೇರಳದ ಇಬ್ಬರು ಯುವ ವೈದ್ಯರು ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇವರು ಗೂಗಲ್ ಮ್ಯಾಪ್ ಅವಲಂಬಿಸಿದ್ದರು. ಈ ವೇಳೆ ಕಾರಿನ ಮಾರ್ಗದ ಕುರಿತಾದ ಎಡವಟ್ಟಿನಿಂದಾಗಿ ವೈದ್ಯರು ಪ್ರಯಾಣಿಸುತ್ತಿದ್ದ ಕಾರು ಪೆರಿಯಾರ್ ನದಿಗೆ ಬಿದ್ದಿದ್ದಾರೆ. ಪರಿಣಾಮ ಇಬ್ಬರೂ ವೈದ್ಯರು ಸಾವಿಗೀಡಾಗಿದ್ದಾರೆ.
ಕೊಚ್ಚಿಯ ಗೋಥೂರತ್ ಎಂಬಲ್ಲಿ ಭಾನುವಾರ ಬೆಳಗಿನ ಜಾವ 12.30ಕ್ಕೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಯುವ ವೈದ್ಯರಾದ 29 ವರ್ಷ ವಯಸ್ಸಿನ ಅದ್ವೈತ್ ಹಾಗೂ ಅಜ್ಮಲ್ ಮೃತಪಟ್ಟಿದ್ದಾರೆ. ಇವರಿಬ್ಬರೂ ಕೊಚ್ಚಿ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಇದೇ ಕಾರಿನಲ್ಲಿ ಇಬ್ಬರು ಯುವ ವೈದ್ಯರ ಜೊತೆಗೆ ಇನ್ನೂ ಮೂವರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಎಲ್ಲರೂ ಅವರು ಬದುಕುಳಿದಿದ್ದಾರೆ. ಗಾಯಗೊಂಡ ಮೂವರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ನದಿ ಬಳಿಗೆ ತಂದ ಗೂಗಲ್ ಮ್ಯಾಪ್ :
ಕಾರು ಚಲಾವಣೆ ಮಾಡುತ್ತಿದ್ದ ಯುವ ವೈದ್ಯರು ಗೂಗಲ್ ಮ್ಯಾಪ್ ಬಳಸಿದ್ದರು. ಈ ವೇಳೆ ತಾಂತ್ರಿಕ ದೋಷ ಉಂಟಾಗಿ ಗೂಗಲ್ ಮ್ಯಾಪ್ ಅವರನ್ನು ನದಿ ಬಳಿಗೆ ತಂದು ನಿಲ್ಲಿಸಿತ್ತು.
ಹಾಗೆ ನೋಡಿದ್ರೆ ಅಪಘಾತ ಸಂಭವಿಸುವ ವೇಳೆ ಮಧ್ಯ ರಾತ್ರಿಯಾಗಿತ್ತು. ಜೊತೆಗೆ ವಿಪರೀತ ಮಳೆ ಕೂಡಾ ಬರುತ್ತಿತ್ತು. ಕಾರು ಚಾಲಕನಿಗೆ ಮುಂದೇನಿದೆ ಎಂದೇ ಗೊತ್ತಾಗದಂಥಾ ಪರಿಸ್ಥಿತಿ ಇತ್ತು. ಸರಿಯಾಗಿ ಏನೂ ಕಾಣುತ್ತಿರಲಿಲ್ಲ. ಹೀಗಾಗಿ. ಗೂಗಲ್ ಮ್ಯಾಪ್‌ನ ಮಾರ್ಗವನ್ನು ಆತನ ಸೂಕ್ತವಾಗಿ ಗ್ರಹಿಸಲು ಸಾಧ್ಯವಾಗಲಿಲ್ಲ.
ತಪ್ಪು ಗ್ರಹಿಕೆ?
ಗಾಯಾಳುಗಳ ಪ್ರಕಾರ ಗೂಗಲ್ ಮ್ಯಾಪ್ ಅವರಿಗೆ ಬಲಕ್ಕೆ ತಿರುಗಿ ಎಂದು ಹೇಳಿತ್ತು. ಆದರೆ ಕಾರು ಚಲಾಯಿಸುತ್ತಿದ್ದ ಯುವ ವೈದ್ಯ ತಪ್ಪಾಗಿ ಕಾರನ್ನು ಎಡಕ್ಕೆ ತಿರುಗಿಸಿದ್ದ. ಹೀಗಾಗಿ, ಕಾರು ನದಿ ದಡದಲ್ಲಿ ಸಾಗುವ ವೇಳೆ ನದಿಗೆ ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಸಂಭವಿಸಿದ ವೇಳೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ನದಿಯಿಂದ ಕಾರನ್ನು ಮೇಲಕ್ಕೆ ಎತ್ತಲು ಸಹಕಾರ ನೀಡಿದರು. ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೂ ಮಾಹಿತಿ ರವಾನಿಸಿದರು. ಹರಸಾಹಸಪಟ್ಟು ಉಕ್ಕಿ ಹರಿಯುತ್ತಿದ್ದ ನದಿಯಿಂದ ಕಾರನ್ನು ಮೇಲಕ್ಕೆ ಎತ್ತಲಾಯ್ತು. ಈ ವೇಳೆಗಾಗಲೇ ಕಾರಿನಲ್ಲಿದ್ದ ಐವರ ಪೈಕಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದರು.
ಗಾಯಗೊಂಡ ಮೂವರ ಪೈಕಿ ಓರ್ವ ಯುವತಿ ಕೂಡಾ ಇದ್ದಾಳೆ. ಇನ್ನು ಮೃತಪಟ್ಟ ಇಬ್ಬರು ಯುವಕರು ನದಿಗೆ ಬಿದ್ದಿದ್ದರು. ಅವರನ್ನು ರಕ್ಷಿಸಲು ಸ್ಕೂಬಾ ಡೈವಿಂಗ್ ತಂಡದ ನೆರವು ಪಡೆದು ಅವರ ಶವಗಳನ್ನು ನದಿಯಿಂದ ಮೇಲಕ್ಕೆ ತರಲಾಗಿದೆ. ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.