ಕುಂದಾಪುರ: ಭಾನುವಾರ ರಾತ್ರಿ ಚೂರಿ ಇರಿತದಿಂದ ಗಂಭೀರ ಗಾಯಗೊಂಡು ವ್ಯಕ್ತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಘಟನಾ ಸ್ಥಳಕ್ಕೆ ಉಡುಪಿ ಎಸ್‌ಪಿ ಡಾ.ಅರುಣ್ ಕೆ. ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಇನ್ನು ಪ್ರಕರಣದ ಕುರಿತು ತನಿಖೆ ಆರಂಭವಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಏನಿದು ಪ್ರಕರಣ :

ಕುಂದಾಪುರದ ಖಾರ್ವಿಕೇರಿಯ ನಿವಾಸಿಯಾದ ರಾಘವೇಂದ್ರ ಶೇರುಗಾರ್(42) ಭಾನುವಾರ ರಾತ್ರಿ ಚಿಕ್ಕಮ್ಮನಸಾಲು ರಸ್ತೆಯ ಪೋಸ್ಟ್ ಆಫೀಸ್ ಬಳಿ ತಮ್ಮ ಕಾರಿನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಕಾರು ಸೈಡ್ ಕೊಡುವ ವಿಚಾರದಲ್ಲಿ ಗಲಾಟೆಯಾಗಿದೆ. ತೀವ್ರಗೊಂಡ ಗಲಾಟೆಯಲ್ಲಿ ವ್ಯಾಗನರ್ ಕಾರಿನಲ್ಲಿದ್ದ ವ್ಯಕ್ತಿ ರಾಘವೇಂದ್ರ ಅವರ ತೊಡೆಯ ಭಾಗಕ್ಕೆ ಚೂರಿಯಿಂದ ಇರಿದು ಪರಾರಿಯಾಗಿದ್ದ.
ತೀವ್ರ ರಕ್ತಸ್ರಾವದಿಂದ ಬಳಲುತ್ತಿಂದ ರಾಘವೇಂದ್ರ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೊಡೆ ಭಾಗಕ್ಕೆ ಆಳವಾಗಿ ಗಾಯವಾದ ಹಿನ್ನೆಲೆ ತೀವ್ರರಕ್ತಸ್ರಾವವಾಗಿದ್ದು, ಸೋಮವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

