ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಉಡುಪಿ ಜಿಲ್ಲೆಯ ಕಟ್ಟಡ ಸಾಮಗ್ರಿಗಳ ಸಾಗಾಟ ಸಾಮಗ್ರಿಗಳ ವಾಹನಗಳ ಮಾಲಕರು ಕಾರ್ಮಿಕರು ೭ನೇ ದಿನವೂ ಮುಷ್ಕರವನ್ನು ಮುಂದುವರಿಸಿದ್ದಾರೆ.
ಈ ನಡುವೆ ಶಾಂತಿಯುತವಾಗಿ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಸಾಲಾಗಿ ನಿಲ್ಲಿಸಿದ ಲಾರಿಗಳನ್ನು ಪ್ರತೀ ದಿನ ರಾತ್ರಿ ಇಲ್ಲಿನ ಖಾಸಗಿ ಜಾಗವೊಂದರಲ್ಲಿ ನಿಲ್ಲಿಸಿ ಬೆಳಿಗ್ಗೆ ಪುನ: ರಸ್ತೆಯಲ್ಲಿ ಇರಿಸುವ ಕ್ರಮಕ್ಕೆ ಭಾನುವಾರ ಪೊಲೀಸರು ನಿಲುಗಡೆ ಮಾಡಲಾದ ಪ್ರತೀ ಲಾರಿ ಟೆಂಪೋಗಳಿಗೆ ರಸ್ತೆಯಲ್ಲಿ ನಿಲ್ಲಿಸದಂತೆ ಸೂಚನಾ ಪತ್ರವನ್ನು ಹಾಕಿದ್ದಾರೆ.
ಸೋಮವಾರ ಬೆಳಿಗ್ಗೆ ಮುಷ್ಕರ ನಿರತರಿಂದ ಗಾಂಧಿ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಜಯಂತಿ ನಡೆಸಿ ಮುಷ್ಕರ ಮುಂದುವರಿಸಿದರು. ಬಳಿಕ ಕೋಟದಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಸಿ ಮುಂದಿನ ಹೋರಾಟದ ಮಾತು ಕತೆ ನಡೆಸಿದರು.
ಟಿಪ್ಪರ್ ಮಾಲಕರ ಸಂಘದ ವಿಜಯ ಕುಮಾರ್ , ಸುಧಾಕರ ಶೆಟ್ಟಿ, ಮಟಪಾಡಿ ವಿಶ್ವನಾಥ್ ಶೆಟ್ಟಿ , ಸುಮತಿ ಸಂತೋಷ್ ಬಿರ್ತಿ , ಹಂಮಜಾ ಮುಷ್ಕರದ ನೇತೃತ್ವ ವಹಿಸಿದ್ದು ಕಾರ್ಮಿಕರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮುಷ್ಕರದಲ್ಲಿದ್ದಾರೆ.
ಅ.3 ರಂದು ರಾಜ್ಯ ಪಾಲರ ಜಿಲ್ಲಾ ಪ್ರವಾಸ ಇರುವ ಕಾರಣ ರಸ್ತೆ ಬದಿಯಲ್ಲಿ ಇರಿಸಲಾದ ಲಾರಿ ಟೆಂಪೋಗಳನ್ನು ತೆರವು ಮಾಡಿಸಲು ಇಲಾಖೆಯ ಸೂಚನೆ ಬಂದ ಕಾರಣ ತೆರವು ಮಾಡಲಾಗಿದೆ ಎಂದು ಬ್ರಹ್ಮಾವರ ಪೊಲೀಸ್ ಠಾಣಾ ಮೂಲಗಳು ತಿಳಿಸಿದೆ.