ನವದೆಹಲಿ : 2023ರ ಪುರುಷರ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಜಾಗತಿಕ ರಾಯಭಾರಿಯಾಗಿ ಸಚಿನ್ ತೆಂಡೂಲ್ಕರ್ ಅವರನ್ನು ಐಸಿಸಿ ಮಂಗಳವಾರ ನೇಮಿಸಿದೆ.
ಸಚಿನ್ ತೆಂಡೂಲ್ಕರ್ ಆರು ಬಾರಿ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 1992 ರಲ್ಲಿ ಸಚಿನ್ ಮೊದಲ ಬಾರಿಗೆ ವಿಶ್ವಕಪ್ ಆಡಿದ್ದರು. ಅವರು ಕೊನೆಯ ಬಾರಿಗೆ 2011 ರಲ್ಲಿ ವಿಶ್ವಕಪ್‌ನಲ್ಲಿ ಆಡಿದ್ದು, ಭಾರತ ತಂಡವು ಎರಡನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಅ.5 ರಂದು ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಣ ಆರಂಭಿಕ ಪಂದ್ಯಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ವಿಶ್ವಕಪ್ ಟ್ರೋಫಿಯೊಂದಿಗೆ ಮೈದಾನಕ್ಕೆ ಬಂದು ಟೂರ್ನಿಗೆ ಅಧಿಕೃತ ಚಾಲನೆ ನೀಡಲಿದ್ದಾರೆ.
ಯುವ ಆಟಗಾರರಿಗೆ ವಿಶ್ವಕಪ್ ಸ್ಫೂರ್ತಿ
“1987 ರಲ್ಲಿ ಬಾಲ್ ಬಾಯ್ ಆಗಿ ಆರು ವಿಶ್ವಕಪ್ ಟೂರ್ನಿಗಳಲ್ಲಿ ದೇಶವನ್ನು ಪ್ರತಿನಿಧಿಸುವವರೆಗೆ, ವಿಶ್ವಕಪ್ ಯಾವಾಗಲೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. 2011ರಲ್ಲಿ ವಿಶ್ವಕಪ್ ಗೆದ್ದಿದ್ದು ನನ್ನ ಕ್ರಿಕೆಟ್ ಜೀವನದ ಹೆಮ್ಮೆಯ ಕ್ಷಣ,” ಎಂದು ಸಚಿನ್ ತೆಂಡೂಲ್ಕರ್ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
“ಭಾರತದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯಲ್ಲಿ ಹಲವು ತಂಡಗಳು ಮತ್ತು ಆಟಗಾರರು ಕಠಿಣವಾಗಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಈ ಅದ್ಭುತ ಟೂರ್ನಿಗಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ. ವಿಶ್ವಕಪ್‌ನಂತಹ ದೊಡ್ಡ ಸ್ಪರ್ಧೆಗಳು ಯುವ ಆಟಗಾರರಿಗೆ ಸ್ಫೂರ್ತಿ ನೀಡುತ್ತವೆ. ಈ ಬಾರಿ ಪಂದ್ಯಾವಳಿಯು ಯುವತಿಯರು ಮತ್ತು ಹುಡುಗರು ಕ್ರೀಡೆಗೆ ಸೇರಲು ಮತ್ತು ಉನ್ನತ ಮಟ್ಟದಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಲು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.