ಬೆಂಗಳೂರು: ಗಾಜಾ ಪಟ್ಟಿಯಿಂದ ಹಮಾಸ್ ಉಗ್ರರು ರಾಕೆಟ್ ದಾಳಿ ಮಾಡಿದ್ದು, ಈ ಬೆನ್ನಲ್ಲೇ ಇಸ್ರೇಲ್ ಯುದ್ಧ ಘೋಷಣೆ ಮಾಡಿದೆ. ಹೀಗಾಗಿ ನಾಗರಿಕರಲ್ಲಿ ಭಯದ ವಾತಾವರಣ ಉಂಟಾಗಿದೆ. ಅಲ್ಲಿ ನೆಲೆಸಿರುವ ಭಾರತೀಯರ ಸುರಕ್ಷತಾ ದೃಷ್ಠಿಯಿಂದ ಇಸ್ರೇಲ್ನಲ್ಲಿರುವ ಭಾರತದ ರಾಯಭಾರ ಕಚೇರಿ ಭಾರತೀಯ ನಾಗರಿಕರಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಜಾಗರೂಕತೆಯಿಂದಿರಿ, ಸುರಕ್ಷಾ ಮಾನದಂಡಗಳನ್ನು ಅನುಸರಿಸಿ ಎಂದು ಹೇಳಿದೆ.
‘ಇಸ್ರೇಲ್ನಲ್ಲಿ ಸದ್ಯ ಇರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್ನಲ್ಲಿರುವ ಭಾರತೀಯ ನಾಗರಿಕರು ಎಚ್ಚರಿಕೆಯಿಂದಿರಲು ಮನವಿ ಮಾಡಲಾಗುತ್ತಿದೆ. ಸ್ಥಳೀಯ ಅಧಿಕಾರಿಗಳು ನೀಡುವ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. ಅನಗತ್ಯ ಸಂಚಾರ ಬೇಡ. ಸುರಕ್ಷಿತ ಸ್ಥಳಗಳಲ್ಲಿ ಇರಿ ಎಂದು ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಗತ್ಯ ಬಿದ್ದರೆ + 97235226748 ಈ ಮೊಬೈಲ್ ಸಂಖ್ಯೆ ಅಥವಾ, cons1.telaviv@mea.gov.in ಈ ಇ-ಮೇಲ್ ಐಡಿಗೆ ಸಂಪರ್ಕಿಸಲು ಕೋರಿದೆ.
ಶನಿವಾರ ಬೆಳಿಗ್ಗೆ ಗಾಜಾ ಪಟ್ಟಿಯಿಂದ ಹಮಾಸ್ ಉಗ್ರರು ಇಸ್ರೇಲ್ ಮೇಲೆ 5 ಸಾವಿರ ರಾಕೆಟ್ ದಾಳಿ ನಡೆಸಿದೆ. ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ಮೇಲೆ ನಡೆಯುತ್ತಿರುವ ಅತಿ ದೊಡ್ಡ ದಾಳಿ ಇದಾಗಿದೆ.