ಹೊಸದಿಲ್ಲಿ: ಅಫಘಾನಿಸ್ತಾನ ವಿರುದ್ಧ 2023ರ ಏಕದಿನ ವಿಶ್ವಕಪ್ ಟೂರ್ನಿಯ 9ನೇ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಲವು ವಿಶೇಷ ದಾಖಲೆಗಳನ್ನು ಬರೆದಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ 7ನೇ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಟ್‌ಮ್ಯಾನ್ ಮುರಿದಿದ್ದಾರೆ.
ಕಪಿಲ್ ದಾಖಲೆ ಉಡೀಸ್ :
ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ವೇಗವಾಗಿ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ರೋಹಿತ್ ಶರ್ಮಾ ಭಾಜನರಾಗಿದ್ದಾರೆ. ಆ ಮೂಲಕ ಭಾರತದ ಮಾಜಿ ನಾಯಕ ಕಪಿಲ್ ದೇವ್ ದಾಖಲೆಯನ್ನು ಮುರಿದ್ದಾರೆ. ರೋಹಿತ್ ಶರ್ಮಾ ಅವರು 63 ಎಸೆತಗಳಲ್ಲಿ ಮೂರಂಕಿ ವೈಯಕ್ತಕ ಮೊತ್ತವನ್ನು ದಾಖಲಿಸಿದ್ದಾರೆ. 1983 ವಿಶ್ವಕಪ್‌ನಲ್ಲಿ ಕಪಿಲ್ ದೇವ್ ಅವರು ಜಿಂಬಾಬ್ವೆ ವಿರುದ್ದದ ಪಂದ್ಯದಲ್ಲಿ 73 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ ರೋಹಿತ್ ಶರ್ಮಾ ಈ ದಾಖಲೆಯನ್ನು ಮುರಿದ್ದಾರೆ.
1000 ವಿಶ್ವಕಪ್ ರನ್:
ಶತಕದ ಮೂಲಕ ರೋಹಿತ್ ಶರ್ಮಾ ಅವರು ವಿಶ್ವಕಪ್‌ನಲ್ಲಿ ವೇಗವಾಗಿ 1000 ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಜಂಟಿ ದಾಖಲೆಯನ್ನು ಬರೆದರು. ಈ ಸಾಧನೆ ಮಾಡಲು ರೋಹಿತ್ ಶರ್ಮಾ 19 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ಆರಂಭಿಕ ಡೇವಿಡ್ ವಾರ್ನರ್ ಕೂಡ 19 ಇನಿಂಗ್ಸ್‌ಗಳನ್ನು ಪಡೆದುಕೊಂಡಿದ್ದರು. ಇದೀಗ ಈ ಸಾಧಕರ ಪಟ್ಟಿಯಲ್ಲಿ ವಾರ್ನರ್-ರೋಹಿತ್ ಜಂಟಿ ಅಗ್ರ ಸ್ಥಾನದಲ್ಲಿದ್ದಾರೆ.
ಕ್ರಿಸ್ ಗೇಲ್ ದಾಖಲೆ ಮುರಿದ ಹಿಟ್‌ಮ್ಯಾನ್:
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ಅವರ ದಾಖಲೆಯನ್ನು ರೋಹಿತ್ ಶರ್ಮಾ ಮುರಿದಿದ್ದಾರೆ. ಅಫಘಾನಿಸ್ತಾನ ವಿರುದ್ದ ರೋಹಿತ್ ಶರ್ಮಾ 5 ಸಿಕ್ಸರ್ ಸಿಡಿಸುವ ಮೂಲಕ ತಮ್ಮ ವೃತ್ತಿ ಜೀವನದಲ್ಲಿ 556 ಸಿಕ್ಸರ್‌ಗಳನ್ನು ಸಿಡಿಸಿ ಈ ಸಾಧಕರ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಕ್ರಿಸ್ ಗೇಲ್ 553 ಸಿಕ್ಸರ್‌ಗಳ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
ರಿಕಿ ಪಾಂಟಿಂಗ್‌ರನ್ನು ಹಿಂದಿಕ್ಕಿದ ರೋಹಿತ್:
ಅಫಘಾನಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು ತಮ್ಮ ಏಕದಿನ ವೃತ್ತಿ ಜೀವನದಲ್ಲಿ 31 ನೇ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಈ ಪಟ್ಟಿಯಲ್ಲಿ 30 ಶತಕ ಸಿಡಿಸಿದ್ದ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಟೀಮ್ ಇಂಡಿಯಾ ನಾಯಕ ಹಿಂದಿಕ್ಕಿದ್ದಾರೆ.
ಆರಂಭಿಕನ ದಾಖಲೆ:
ಏಕದಿನ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಅತ್ಯಧಿಕ ಶತಕ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎಂಬ ದಾಖಲೆ ರೋಹಿತ್ ಶರ್ಮಾ ಪಾಲಾಗಿದೆ. ಈ ಪಟ್ಟಿಯಲ್ಲಿ ಆರಂಭಿಕನಾಗಿ 45 ಶತಕ ಬಾರಿಸಿರುವ ಸಚಿನ್ ಅಗ್ರಸ್ಥಾನದಲ್ಲಿದ್ದರೆ, 29 ಶತಕ ಸಿಡಿಸಿರುವ ಹಿಟ್ಮ್ಯಾನ್ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.
ಶತಕದ ಸರದಾರ:
ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಇದೀಗ ರೋಹಿತ್ ಶರ್ಮಾ 3ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (49) ಅಗ್ರಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ (47) ದ್ವಿತೀಯ ಸ್ಥಾನದಲ್ಲಿದ್ದಾರೆ. ಇದೀಗ 31 ಶತಕಗಳೊಂದಿಗೆ ಹಿಟ್ಮ್ಯಾನ್ ಮೂರನೇ ಸ್ಥಾನಕ್ಕೇರಿದ್ದಾರೆ.
ಕಡಿಮೆ ಇನಿಂಗ್ಸ್ನಲ್ಲಿ ಅತ್ಯಧಿಕ ಶತಕ: ಏಕದಿನ ವಿಶ್ವಕಪ್ ಇತಿಹಾಸದಲ್ಲೇ ಕಡಿಮೆ ಇನಿಂಗ್ಸ್ಗಳಲ್ಲಿ ಅತ್ಯಧಿಕ ಶತಕ ಸಿಡಿಸಿದ ವಿಶೇಷ ದಾಖಲೆ ರೋಹಿತ್ ಶರ್ಮಾ ಪಾಲಾಗಿದೆ. ಕೇವಲ 19 ಇನಿಂಗ್ಸ್ಗಳ ಮೂಲಕ ಹಿಟ್ಮ್ಯಾನ್ 7 ವರ್ಲ್ಡ್ಕಪ್ ಶತಕಗಳನ್ನು ಸಿಡಿಸಿದ್ದಾರೆ.
50 ಸಿಕ್ಸಸ್ ದಾಖಲೆ:
ಏಕದಿನ ಕ್ರಿಕೆಟ್‌ನಲ್ಲಿ ನಾಲ್ಕು ವರ್ಷಗಳಲ್ಲೂ 50 ಕ್ಕಿಂತ ಹೆಚ್ಚು ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆ ಕೂಡ ಇದೀಗ ರೋಹಿತ್ ಶರ್ಮಾ ಪಾಲಾಗಿದೆ. ಹಿಟ್ಮ್ಯಾನ್ 2017, 2018, 2019 ಮತ್ತು 2023 ರಲ್ಲಿ ಈ ಸಾಧನೆ ಮಾಡಿದ್ದಾರೆ.
ಪವರ್ ಹಿಟ್ಟರ್:
ಏಕದಿನ ಕ್ರಿಕೆಟ್ನ ಪವರ್ಪ್ಲೇನಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಕೂಡ ರೋಹಿತ್ ಶರ್ಮಾ ಹೆಸರಿಗೆ ಸೇರ್ಪಡೆಯಾಗಿದೆ.