ಬೆಂಗಳೂರು: ಪ್ರೇಯಸಿಯ ಖಾಸಗಿ ಫೋಟೋಗಳನ್ನು ಅಪ್‌ಲೋಡ್ ಮಾಡಲೆಂದೇ ಆ್ಯಪ್ ಸೃಷ್ಟಿಸಿ, ಇನ್‌ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದ ಯುವಕನೊಬ್ಬ ಜೈಲು ಸೇರಿರುವ ಘಟನೆ ನಡೆದಿದೆ.
ತಮಿಳುನಾಡಿನ ಸಂಜಯ್ ಕುಮಾರ್(26) ಬಂಧಿತ.
ಆತನಿಂದ ಪೆನ್‌ಡ್ರೈವ್, ಲ್ಯಾಪ್‌ಟಾಪ್, 2 ಮೊಬೈಲ್‌ಗಳು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಮತ್ತು ತಮಿಳುನಾಡು ಮೂಲದ ಯುವತಿ ಬಾಲ್ಯ ಸ್ನೇಹಿತರಾಗಿದ್ದಾರೆ. ಇಬ್ಬರು ಬಿ ಪ್ಲಾನಿಂಗ್ ಕೋರ್ಸ್ ಮಾಡುತ್ತಿದ್ದರು. ಹೀಗಾಗಿ, ನಗರದಲ್ಲಿ ಇಬ್ಬರು ಒಟ್ಟಿಗೆ ವಾಸವಾಗಿದ್ದು, ಸಹಜೀವನ ನಡೆಸುತ್ತಿದ್ದರು. ಈ ಮಧ್ಯೆ ಆರೋಪಿ ತನ್ನ ಪ್ರೇಯಸಿ ಜತೆ ಕಳೆದ ಖಾಸಗಿ ಕ್ಷಣಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದ. ಜತೆಗೆ ಆಕೆಯ ಪ್ರತ್ಯೇಕ ಖಾಸಗಿ ಫೋಟೋಗಳನ್ನು ಸಂಗ್ರಹಿಸಿಕೊಂಡಿದ್ದ. ಅದಕ್ಕಾಗಿ ಒಂದು ಆ್ಯಪ್ ಕೂಡ ಸಿದ್ಧಪಡಿಸಿದ್ದ ಎನ್ನಲಾಗಿದೆ.
ಆರೋಪಿ ಪ್ರೇಯಸಿ ಮಾತ್ರವಲ್ಲದೆ, ಪರಿಚಯಸ್ಥ ಯುವತಿಯರ ಅರೆನಗ್ನ ಫೋಟೋಗಳನ್ನು ಸೃಷ್ಟಿಸಲೆಂದು ತಾನೇ “ಬಿಓಟಿ’ ಎಂಬ ಆ್ಯಪ್ ಸಿದ್ಧಪಡಿಸಿದ್ದ. ಅದರಲ್ಲಿ ಪ್ರೇಯಿಸಿ ಹಾಗೂ ಇತರೆ ಯುವತಿಯರ ಅಶ್ಲೀಲ ಫೋಟೋಗಳನ್ನು ಸೃಷ್ಟಿಸುತ್ತಿದ್ದ.
ನಂತರ ಇನ್‌ಸ್ಟ್ರಾಗ್ರಾಂ, ಟೆಲಿಗ್ರಾಂ ಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದ.
2021ರಲ್ಲಿ ಇನ್‌ಸ್ಟ್ರಾಗ್ರಾಂನ ಕೆಲ ಖಾತೆಗಳಲ್ಲಿ ತನ್ನ ನಗ್ನ ಫೋಟೋಗಳನ್ನು ಕಂಡು ಗಾಬರಿಗೊಂಡಿದ್ದ ಸಂತ್ರಸ್ತೆ, ರಿಪೋರ್ಟ್ ಮಾಡಿ ಡಿಲೀಟ್ ಮಾಡಿಸಿದ್ದಳು.
ಪೋಸ್ಟ್ ಹಾಕಿದ್ದ ಫೋಟೋಗಳ ಎಕ್ಸ್ ಖಾತೆಗಳ ಅಡ್ಮಿನ್ ಯಾರೆಂದು ಪರಿಶೀಲಿಸಿದಾಗ ಕೆಲ ಅನುಮಾನಗಳು ಬಂದಿದ್ದವು ಎಂದು ಪೊಲೀಸರು ಹೇಳಿದರು.
ಮತ್ತೂಂದೆಡೆ ಪ್ರೇಯಸಿ ಜತೆ ಆರೋಪಿ ಕೂಡ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ. ಈ ವೇಳೆ ಆರೋಪಿ ತನಗೆ ಏನು ಗೊತ್ತಿಲ್ಲದಂತೆ ವರ್ತಿಸಿದ್ದ. ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡಿದ್ದ ಎಕ್ಸ್ ಖಾತೆಗಳ ಅಡ್ಮಿನ್ ಯಾರೆಂದು ಪರಿಶೀಲಿಸಿದಾಗ ಆರೋಪಿ ಮೊಬೈಲ್ ನಂಬರ್ ಪತ್ತೆಯಾಗಿತ್ತು. ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ಈ ಕುರಿತು ಅಗ್ನೇಯ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.