ಗಾಜಾ ಸಿಟಿ: ಗಾಜಾಪಟ್ಟಿಯಲ್ಲಿರುವ ಹಮಾಸ್ ಉಗ್ರರನ್ನು ಸದೆ ಬಡಿಯುವ ಪಣತೊಟ್ಟಿರುವ ಇಸ್ರೇಲ್ ಉತ್ತರ ಗಾಜಾದಲ್ಲಿರುವ ಪ್ಯಾಲೆಸ್ಟೀನಿಯನ್ ಜನರನ್ನು 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಗಾಜಾಕ್ಕೆ ಸ್ಥಳಾಂತರಗೊಳ್ಳುವಂತೆ ಆದೇಶಿಸಿದ್ದು, ಈ ಆದೇಶವನ್ನು ಹಮಾಸ್ ತಿರಸ್ಕರಿಸಿದೆ.
ಸರಿಸುಮಾರು 1.1 ಮಿಲಿಯನ್ ಪ್ಯಾಲೆಸ್ಟೀನಿಯನ್ನರು ವಾಡಿ ಗಾಜಾದ ಉತ್ತರದಲ್ಲಿ ನೆಲೆಸಿದ್ದಾರೆ. ಇವರ ಸ್ಥಳಾಂತರಕ್ಕೆ ಇಸ್ರೇಲ್ ಆದೇಶಿಸಿದೆ.
ಇಸ್ರೇಲ್ ಯೋಧರು ಗಾಜಾದ ನಿವಾಸಿಗಳ ವೈಯಕ್ತಿಕ ಸುರಕ್ಷತೆಗೆ ಒತ್ತು ನೀಡಿದ್ದು, ಹಮಾಸ್ ಭಯೋತ್ಪಾದಕರು ಅವರನ್ನು ಮಾನವ ಗುರಾಣಿಗಳಾಗಿ ಬಳಸುವ ಸಾಧ್ಯತೆ ಇರುವುದರಿಂದ ಸ್ಥಳದಿಂದ ತೆರಳುವಂತೆ ಒತ್ತಾಯಿಸಿದೆ.
ಆದರೆ, ಇಸ್ರೇಲ್’ನ ಈ ಆದೇಶವನ್ನು ಹಮಾಸ್ ತಿರಸ್ಕರಿಸಿದೆ. “ನಾವು ತುಂಬಾ ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳಾಗಿದ್ದೇವೆ. ಆ ನಿಟ್ಟಿನಲ್ಲಿ ಯುದ್ಧವನ್ನು ಮುಂದುವರಿಸುತ್ತೇವೆ. ನಮ್ಮ ಬಳಿಯೂ ಹೋರಾಟಗಾರರು ಮತ್ತು ಬೆಂಬಲಿಗರಿದ್ದಾರೆ. ಇಸ್ರೇಲ್ ಬೆದರಿಕೆಯನ್ನು, ಪಲಾಯನಗೊಳ್ಳುವಂತೆ ನೀಡುತ್ತಿರುವ ಆದೇಶವನ್ನು ನಾವು ತಿರಸ್ಕರಿಸುತ್ತಿದ್ದೇವೆಂದು ಹೇಳಿದೆ.
ನಾವು ನಮ್ಮ ಭೂಮಿಯಲ್ಲಿ ಮನೆಗಳಲ್ಲಿ, ನಮ್ಮ ನಗರಗಳಲ್ಲಿ ಸ್ಥಿರವಾಗಿ ನಿಂತಿದ್ದೇವೆ. ನಮ್ಮಿಂದ ಯಾವುದೇ ಸ್ಥಳಾಂತರಗಳೂ ಇರುವುದಿಲ್ಲ ಎಂದು ತಿಳಿಸಿದೆ.
ಇಸ್ರೇಲ್ ಆದೇಶ ಕುರಿತು ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆ, ಇಸ್ರೇಲ್ ಆದೇಶದಂತೆ ಸರಿಸುಮಾರು 1.1 ಮಿಲಿಯನ್ ಜನರನ್ನು ಸ್ಥಳಾಂತರಿಸಬೇಕಾಗುತ್ತದೆ. ಈ ಆದೇಶವು ಎಲ್ಲ ವಿಶ್ವಸಂಸ್ಥೆ ಸಿಬ್ಬಂದಿ ಮತ್ತು ಶಾಲೆಗಳು, ಆರೋಗ್ಯ ಕೇಂದ್ರಗಳು ಮತ್ತು ಚಿಕಿತ್ಸಾಲಯಗಳು ಸೇರಿದಂತೆ ವಿಶ್ವಸಂಸ್ಥೆಯ ಸೌಲಭ್ಯಗಳಲ್ಲಿ ಆಶ್ರಯ ಪಡೆದವರಿಗೆ ಅನ್ವಯಿಸುತ್ತದೆ. ಇಷ್ಟೊಂದು ಬೃಹತ್ ಸಂಖ್ಯೆಯ ಜನರನ್ನು ಸ್ಥಳಾಂತರಿಸುವುದು ವಿನಾಶಕಾರಿ ಪರಿಣಾಮಗಳಿಗೆ ಕಾರಣವಾಗಲಿದೆ. ಇಂಥದೊಂದು ಪ್ರಕ್ರಿಯೆ ಅಸಾಧ್ಯ ಎಂದು ಹೇಳಿದೆ. ಅಲ್ಲದೆ, ಇಸ್ರೇಲ್ ಇಂಥ ಆದೇಶ ನೀಡಿದ್ದರೆ ಅದನ್ನು ರದ್ದುಪಡಿಸಬೇಕೆಂದು ಮನವಿ ಮಾಡಿದೆ.