ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀಮಂತ ಕಲೆ ಯಕ್ಷಗಾನ ಕಲೆಯನ್ನು ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದ ಕಾಲದಲ್ಲಿ ಭಾಷೆ, ನೃತ್ಯ ,ಬಣ್ಣ , ಮಾತಿನ ಮೂಲಕ ಪುರಾಣ ,ಸಂಸ್ಕೃತಿ, ಆಚರಣೆ ಸಂಪ್ರದಾಯವನ್ನು ಬಿತ್ತರಿಸಿದ ನಮ್ಮ ಹಿರೀಯ ಕಲಾವಿದರಿಗೆ ಸಿಗುವ ಗೌರವವಾಗಿದೆ ಎಂದು ಎಂದು ಉಪನ್ಯಾಸಕ, ಹವ್ಯಾಸಿ ಯಕ್ಷಗಾನ ಕಲಾವಿದ ಕೋಟ ಸುಜಯೀಂದ್ರ ಹಂದೆ ಹೇಳಿದರು.
ಬ್ರಹ್ಮಾವರ ಸಾಲಿಕೇರಿಯ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆದ ಶ್ರೀ ದಶಾವತಾರ ಯಕ್ಷ ಶಿಕ್ಷಣ ಕೇಂದ್ರ (ರಿ), ಬ್ರಹ್ಮಾವರ ಇದರ ನಾಲ್ಕನೆಯ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಸವ್ಯಸಾಚಿ ಪುರಸ್ಕಾರವನ್ನು ಪಡೆದು ಅವರು ಮಾತನಾಡಿ ಮನೆ ಸಂಸಾರ ನಿದ್ದೆಯನ್ನು ತೊರೆದು ಯಕ್ಷಗಾನವನ್ನೆ ಜೀವನ ಮುಡಿಪಾಗಿಸಿದ ಕಲಾವಿದರೀಗೆ ಸರಕಾರ ನೆರವಿನ ಹಸ್ತ ನೀಡಿ ಯಕ್ಷಗಾನ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕು ಎಂದರು.
ಕೇಂದ್ರದ ಅಧ್ಯಕ್ಷ ಶ್ರೀಧರ ಶೆಟ್ಟಿಗಾರ್ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.
ಸಾಲಿಕೇರಿ ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮುಕ್ತೇಸರ ಎಸ್. ಸುರೇಶ್ ಶೆಟ್ಟಿಗಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಬ್ರಹ್ಮಾವರ ರೋಟರಿ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಹಿರಿಯ ಮದ್ದಳೆ ವಾದಕ ಬಿರ್ತಿ ಬಾಲಕೃಷ್ಣ, ಅಜಪುರ ಯಕ್ಷಗಾನ ಸಂಘದ ಗೌರವಾಧ್ಯಕ್ಷ ಕೃಷ್ಣಸ್ವಾಮಿ ಜೋಷಿ, ಉದ್ಯಮಿ ಕಿಶೋರ್ ಕುಮಾರ್ ಕುಕ್ಕುಡೆ, ಅರ್ಥಧಾರಿ ಪದ್ಮನಾಭ ಗಾಣಿಗ, ಕೇಂದ್ರದ ಗೌರವಾಧ್ಯಕ್ಷ ದಯಾನಂದ ನಾಯಕ್ ಸುಂಕೇರಿ, ಕೇಂದ್ರದ ಗುರು ಕಾರ್ತಿಕ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
ದಿವ್ಯ ಸ್ವಾಗತಿಸಿ, ಜಯಶ್ರೀ ಸುಧೀರ್ ಪ್ರಾಸ್ತಾವಿಕ ಮಾತನಾಡಿ ಕಾರ್ಯದರ್ಶಿ ಜಯಲಕ್ಷ್ಮೀ ಶೆಟ್ಟಿಗಾರ್ ವಂದಿಸಿ, ರಾಜೇಶ್ ಶೆಟ್ಟಿಗಾರ್ ನಿರೂಪಿಸಿದರು.