ಮುಂಬೈ : ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ ಘೋಷಣೆ ಹೊರಬಿದ್ದಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. 2028ರ ಲಾಸ್ ಎಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಕ್ರಿಕೆಟ್ ಅಧಿಕೃತ ಕ್ರೀಡೆಯಾಗಿ ಒಲಿಂಪಿಕ್ಸ್‌ನಲ್ಲಿ ಆಯೋಜನೆಗೊಳ್ಳಲಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಮುಂಬೈನಲ್ಲಿ ನಡೆಯುತ್ತಿರುವ 141ನೇ ಅಧಿವೇಶನದಲ್ಲಿ ಈ ಮಹತ್ವದ ಘೋಷಣೆ ಮಾಡಿದೆ. ಇದೇ ವೇಳೆ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗಡಿಸಿದೆ. ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ವಿಚಾರದ ಹಿಂದೆ ವಿರಾಟ್ ಕೊಹ್ಲಿ ಕೂಡ ಕಾರಣ ಎಂಬ ವಿಚಾರ ಹೊರಬಿದ್ದಿದೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ ಹಿಂದೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ. ಈ ವೇಳೆ ಜನಪ್ರಿಯತೆ ಕುರಿತು ಚರ್ಚೆ ನಡೆದಿದೆ. ವಿರಾಟ್ ಕೊಹ್ಲಿ ಜನಪ್ರಿಯತೆ ಈಗಾಗಲೇ ಒಲಿಂಪಿಕ್ಸ್ ಕ್ರೀಡೆಯಲ್ಲಿರುವ ಹಲವು ಜನಪ್ರಿಯ ಕ್ರೀಡಾಪಟುಗಳ ಜನಪ್ರಿಯತೆಗಿಂತ ಅಧಿಕವಾಗಿದೆ ಅನ್ನೋದನ್ನು ಚರ್ಚಿಸಲಾಗಿದೆ.
ಕೊಹ್ಲಿ ಜನಪ್ರಿಯ ಕ್ರೀಡಾಪಟು:
ಕೊಹ್ಲಿ ಕ್ರಿಕೆಟ್‌ನ ಅಂತಾರಾಷ್ಟ್ರೀಯ ರಾಯಭಾರಿ. ಮೇ ತಿಂಗಳಲ್ಲಿ ಕೊಹ್ಲಿ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 250 ಮಿಲಿಯನ್ ಗಡಿ ದಾಟಿದೆ. ಈ ಮೂಲಕ ಕ್ರಿಸ್ಟಿಯಾನೋ ರೋನಾಲ್ಡೋ ಹಾಗೂ ಲಿಯೊನೆಲ್ ಮೆಸ್ಸಗಿಂತ ನಂತರದ ಸ್ಥಾನ ಕೊಹ್ಲಿ ಪಡೆದಿದ್ದಾರೆ ಎಂದು ಲಾಸ್ ಎಂಜಲೀಸ್ ಒಲಿಂಪಿಕ್ಸ್ ಆಯೋಜಕ ಸಮಿತಿ ಅಧ್ಯಕ್ಷ ನಿಕೋಲೋ ಕ್ಯಾಂಪ್ರಿಯಾನಿ ಹೇಳಿದ್ದಾರೆ.
ಸಾಮಾಜಿಕ ಜಾಲತಾದಲ್ಲಿ ಕೊಹ್ಲಿ 315 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಇದ್ದಾರೆ. ವಿಶ್ವದ ಖ್ಯಾತ ಕ್ರೀಡಾಪಟುಗಳಾದ ಲೇಬ್ರಾನ್ ಜೇಮ್ಸ್, ಟಾಮ್ ಬ್ರಾಡಿ, ಟೈಗರ್ ವುಡ್ಸ್ ಸಾಮಾಜಿಕ ಮಾಧ್ಯಮ ಒಟ್ಟು ಫಾಲೋವರ್ಸ್‌ಗಿಂತ ಕೊಹ್ಲಿಗೆ ಅಧಿಕ ಹಿಂಬಾಲಕರಿದ್ದಾರೆ. ಇದು ಒಲಿಂಪಿಕ್ಸ್ ಕ್ರಿಕೆಟ್ ಸೇರ್ಪಡೆಗೆ ನೆರವಾಗಿದೆ ಎಂದು ನಿಕೋಲೋ ಹೇಳಿದ್ದಾರೆ.
ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಒಲಿಂಪಿಕ್ಸ್ ಕ್ರೀಡೆಗಳ ಜೊತೆ ಕ್ರಿಕೆಟ್ ಕೂಡ ಆಯೋಜನೆಗೊಳ್ಳಲಿದೆ. ಕ್ರಿಕೆಟ್ ಜನಪ್ರಿಯತೆ ಇದೀಗ ಮತ್ತಷ್ಟು ವಿಸ್ತರಣೆಗೊಳ್ಳಲಿದೆ ಎಂದು ನಿಕೋಲೋ ಹೇಳಿದ್ದಾರೆ.
ವಿಶ್ವದ ಕ್ರೀಡಾ ತಾರೆಯರಾದ ಸೆರೆನಾ ವಿಲಿಯಮ್ಸ್ ರೋಜರ್ ಫೆಡರ್, ಪ್ಯಾಟ್ರಿಕ್ ಮಹೋಮ್ಸಗಿಂತ ಅಧಿಕ ಹಿಂಬಾಲಕರನ್ನು ಕೊಹ್ಲಿ ಹೊಂದಿದ್ದರೆ. ಕೊಹ್ಲಿ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ ಎಂದು ನಿಕೋಲೋ ಹೇಳಿದ್ದಾರೆ.
ಮುಂಬೈನಲ್ಲಿ ನಡೆಯುತ್ತಿರುವ 141ನೇ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳು ಚರ್ಚೆಯಾಗಿದೆ. ಹಲವು ರಾಷ್ಟ್ರಗಳ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.