ಬೆಂಗಳೂರು : ಪದ್ಮಭೂಷಣ ಪ್ರಶಸ್ತಿ ವಿಜೇತ ಎಸ್ ಎಸ್ ಭೈರಪ್ಪ ಅವರ ಪರ್ವ ಕಾದಂಬರಿ ಸಿನಿಮಾವಾಗಿ ತೆರೆ ಮೇಲೆ ಬರಲಿದೆ. ಹೌದು, ಬಾಲಿವುಡ್ ಅಂಗಳದಲ್ಲಿ ಪರ್ವ ಸಿನಿಮಾವಾಗಿ ಅಪ್ಪಳಿಸಲಿದೆ. ಕಾಶ್ಮೀರ್ ಫೈಲ್ಸ್, ವ್ಯಾಕ್ಸಿನ್ ವಾರ್ ಚಿತ್ರದ ಮೂಲಕ ದೇಶದ ವಿದೇಶದಲ್ಲಿ ಸಂಚಲನ ಸೃಷ್ಟಿಸಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪರ್ವ ಚಿತ್ರದ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾದಂಬರಿಕಾರ, ಎಸ್ಎಲ್ ಭೈರಪ್ಪ, ಪ್ರಕಾಶ್ ಬೆಳವಾಡಿ, ನಿರ್ಮಾಪಕಿ ಪಲ್ಲವಿ ಜೋಶಿ ಸೇರಿದಂತೆ ಪ್ರಮುಖರ ಸಮ್ಮುಖದಲ್ಲಿ ಪರ್ವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಮೂರು ಭಾಗಗಳಾಗಿ ತೆರೆಗೆ :
‘ಪರ್ವ’ ಸಿನಿಮಾ ಕುರಿತು ವಿವೇಕ್ ಅಗ್ನಿಹೋತ್ರಿ ಮಾತನಾಡಿ, ‘ನಟ ಪ್ರಕಾಶ್ ಬೆಳವಾಡಿ ಅವರು ಒಂದು ವರ್ಷದ ಹಿಂದೆ ನನಗೆ ಕರೆ ಮಾಡಿ, ಭೈರಪ್ಪ ಅವರ ಜೊತೆ ಮಾತನಾಡುವಂತೆ ಹೇಳಿದ್ದರು. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ನೋಡಿ, ಅವರು ಪರ್ವ ಸಿನಿಮಾವನ್ನು ಮಾಡುವಂತೆ ಹೇಳಿದರು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಪರ್ವದಲ್ಲಿ ಬರೆದಿದ್ದಾರೆ. ಇದಕ್ಕಾಗಿ ಅವರು ಸಾಕಷ್ಟು ವರ್ಷಗಳ ಕಾಲ ಶ್ರಮಿಸಿದ್ದಾರೆ. ನಾವು ಇದನ್ನು ಸಿನಿಮಾ ಮಾಡುತ್ತಿದ್ದೇವೆ. ಇದು ಮೂರು ಪಾರ್ಟ್ಗಳಲ್ಲಿ ತೆರೆಗೆ ಬರಲಿದೆ. ಒಟ್ಟಿಗೆ ಎಲ್ಲ ಪಾರ್ಟ್ಗಳ ಚಿತ್ರೀಕರಣ ಮಾಡಿ, ನಂತರ ಒಂದೊಂದೇ ತೆರೆಗೆ ತರುತ್ತೇವೆ’ ಎಂದಿದ್ದಾರೆ.