ಗಾಜಾ: ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಘರ್ಷಣೆಯಲ್ಲಿ ಸಾವಿಗೀಡಾದವರ ಸಂಖ್ಯೆ 5500ಕ್ಕೆ ಏರಿದೆ. ಅದರಲ್ಲಿ ಅರ್ಧದಷ್ಟು ಮಕ್ಕಳು ಇದ್ದಾರೆ ಎಂಬ ಮಾಹಿತಿ ಮಂಗಳವಾರ ಹೊರ ಬಿದ್ದಿದೆ.
ಇಸ್ರೇಲ್ ವೈಮಾನಿಕ ದಾಳಿಯನ್ನು ಮುಂದುವರೆಸಿದ್ದು, ಯುದ್ಧ ಪ್ರಾರಂಭವಾದಾಗಿನಿಂದ ಈ ಪ್ರದೇಶದಲ್ಲಿ 5,791 ಜನ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಆಡಳಿತದ ಗಾಜಾ ಪಟ್ಟಿಯಲ್ಲಿರುವ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಂಘರ್ಷದಲ್ಲಿ 2,360 ಮಕ್ಕಳು ಸಾವನ್ನಪ್ಪಿದ್ದು, ಅಕ್ಟೋಬರ್ 7 ರಂದು ಯುದ್ಧ ಆರಂಭವಾದ ನಂತರ ಒಟ್ಟು 16,297 ಜನ ಗಾಯಗೊಂಡಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಹಮಾಸ್ ಸೋಮವಾರ ಗಾಜಾದಲ್ಲಿ ಒತ್ತೆಯಾಳಾಗಿದ್ದ ಇಬ್ಬರು ಇಸ್ರೇಲಿ ಮಹಿಳೆಯರನ್ನು ಬಿಡುಗಡೆ ಮಾಡಿದೆ. ನುರಿಟ್ ಕೂಪರ್ (79 ವರ್ಷ) ಮತ್ತು ಯೋಚೆವೆಡ್ ಲಿಫ್ಶಿಟ್ಜ್ (85 ವರ್ಷ) ಎಂದು ಬಿಡುಗಡೆಗೊಂಡವರು ಎಂದು ಗುರುತಿಸಲಾಗಿದೆ. ಇಸ್ರೇಲ್ ಪ್ರಕಾರ, ಹಮಾಸ್ ಉಗ್ರರು 200 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದ್ದಾರೆ.
ಯುದ್ಧದಿಂದಾಗಿ ಗಾಜಾದಲ್ಲಿ ಮಾನವೀಯ ಬಿಕ್ಕಟ್ಟು ತಲೆದೋರಿದೆ. ಭಾರತ ಸೇರಿದಂತೆ ಅನೇಕ ಕಡೆಯಿಂದ ಮಾನವೀಯ ಮತ್ತು ವೈದ್ಯಕೀಯ ನೆರವು ಗಾಜಾವನ್ನು ತಲುಪಿದೆ. ಆದರೆ ಅಲ್ಲಿ ಕುಡಿಯುವ ನೀರಿಗೆ ಇನ್ನೂ ಸಹ ಹಾಹಾಕಾರ ಇದೆ. ಯಾವುದೇ ಟ್ರಕ್‌ಗಳು ಇಂಧನ ಪೂರೈಸುತ್ತಿಲ್ಲ. ಆಸ್ಪತ್ರೆಗಳು ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.