WORLDCUP 2023: ಆಸ್ಟ್ರೇಲಿಯಾ ನ್ಯೂಜಿಲೆಂಡ್ ತಂಡವನ್ನು ಮಣಿಸಿದೆ. ಭಾರತ ವಿರುದ್ಧ ಸೋತ ನಂತರ ಕಿವೀಸ್ ತಂಡವು ಇದೀಗ ಸತತ ಎರಡನೇ ಸೋಲು ಅನುಭವಿಸಿದೆ.
ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ 388 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವೂ ಉತ್ತಮ ಪ್ರದರ್ಶನ ನೀಡಿತಾದರೂ ಕೊನೆಗೆ ಸೋಲೊಪ್ಪಿಕೊಂಡಿತು. ಕಿವೀಸ್ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 383 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ 14 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡ 37 ರನ್ ಗಳಿಸಿದರು. ಇನ್ನು ಒಂದು ಓವರ್‌ನಲ್ಲಿ 27 ರನ್ ಸಿಡಿಸಿದ್ದು ಬಹುಶಃ ಕೊನೆಯಲ್ಲಿ ಆ ರನ್‌ಗಳು ನ್ಯೂಜಿಲೆಂಡ್‌ಗೆ ಹೆಚ್ಚು ಹೊರೆಯಾಯಿತು. ಕಿವೀಸ್ ಪಂದ್ಯವನ್ನು 5 ರನ್‌ಗಳಿಂದ ಕಳೆದುಕೊಂಡಿತು. ರಚಿನ್ ರವೀಂದ್ರ 116 ರನ್ ಗಳ ಅಮೋಘ ಇನ್ನಿಂಗ್ಸ್ ಆಡಿದರು. ಆದರೆ ಜಿಮ್ಮಿ ನೀಶಮ್ ಕೊನೆಯವರೆಗೂ 58 ರನ್ ಗಳಿಸುವ ಮೂಲಕ ತಂಡವನ್ನು ಮುನ್ನಡೆಸಿದರು ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ.
ಆಸ್ಟ್ರೇಲಿಯಾ ಪರ ಆರಂಭಿಕರಾದ ಟ್ರಾವಿಸ್ ಹೆಡ್ 109 ರನ್ ಮತ್ತು ಡೇವಿಡ್ ವಾರ್ನರ್ 81 ರನ್ ಮೂಲಕ ಆಸ್ಟ್ರೇಲಿಯಾಕ್ಕೆ ಭರ್ಜರಿ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ ಬರೊಬ್ಬರಿ 175 ರನ್ ಗಳ ಜೊತೆಯಾಟವಾಡಿತು. ಬಳಿಕ ಮಿಚೆಲ್ ಮಾರ್ಷ್ (36 ರನ್), ಗ್ಲೆನ್ ಮ್ಯಾಕ್ಸ್ ವೆಲ್ (41 ರನ್) (Glenn Maxwell), ಜೋಷ್ ಇಂಗ್ಲಿಸ್ (38 ರನ್) ಮತ್ತು ನಾಯಕ ಪ್ಯಾಟ್ ಕಮಿನ್ಸ್ (37 ರನ್) ಬ್ಯಾಟಿಂಗ್ ನೆರವಿನಿಂದ 49.2 ಓವರ್ ನಲ್ಲಿ 388 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.
ಬೃಹತ್ ಮೊತ್ತದ ಚೇಸಿಂಗ್‌ನಲ್ಲಿ ನ್ಯೂಜಿಲೆಂಡ್‌ನ ಬ್ಯಾಟಿಂಗ್ ಆರಂಭಿಸಿದ ಡೆವೊನ್ ಕಾನ್ವೆ ಮತ್ತು ವಿಲ್ ಯಂಗ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 7.2 ಓವರ್‌ಗಳಲ್ಲಿ 61 ರನ್‌ಗಳ ಜೊತೆಯಾಟ ನೀಡಿತು. ಈ ವೇಳೆ 17 ಎಸೆತಗಳಲ್ಲಿ 6 ಬೌಂಡರಿ ಸಮೇತ 28 ರನ್ ಗಳಿಸಿದ್ದ ಡೆವೊನ್ ಕಾನ್ವೆ ಔಟಾದರೆ, ನಂತರ ವಿಲ್ ಯಂಗ್ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 32 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ಕ್ರೀಸ್‌ಗೆ ಬಂದ ರಚಿನ್ ರವೀಂದ್ರ ಆಸ್ಟ್ರೇಲಿಯಾ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಿದರು ಮತ್ತು 89 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಮೇತ 116 ರನ್ ಬಾರಿಸಿದರು. ಇನ್ನು ಡೇರಿಲ್ ಮಿಚೆಲ್ 51 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 54 ರನ್ ಗಳಿಸಿ ಔಟಾದರು.
ನಾಯಕ ಟಾಮ್ ಲ್ಯಾಥಮ್ 22 ಎಸೆತಗಳಲ್ಲಿ 2 ಬೌಂಡರಿ ಮೂಲಕ 21 ರನ್ ಗಳಿಸಿದರೆ, ಗ್ಲೆನ್ ಫಿಲಿಪ್ಸ್ 12 ರನ್ ಗಳಿಸಿ ವಿಕೆಟ್ ನೀಡಿದರು. ಕೊನೆಯಲ್ಲಿ ಅಬ್ಬರಿಸಿದ ಜಿಮ್ಮಿ ನೀಶಾಮ್ 39 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ 58 ರನ್ ಗಳಿಸಿ ನ್ಯೂಜಿಲೆಂಡ್ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದರು. ಆದರೆ, ಅವರು ರನೌಟ್ ಆಗುತ್ತಿದ್ದಂತೆ ನ್ಯೂಜಿಲೆಂಡ್ ಸೋಲಿನತ್ತ ವಾಲಿತು.
ಉಳಿದಂತೆ ಮಿಚೆಲ್ ಸ್ಯಾಂಟ್ನರ್ 17 ರನ್, ಮ್ಯಾಟ್ ಹೆನ್ರಿ 9 ರನ್, ಟ್ರೆಂಟ್ ಬೌಲ್ಟ್ 10 ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ 19 ರನ್‌ಗಳು ಬೇಕಾಗಿದ್ದಾಗ ಮಿಚೆಲ್ ಸ್ಟಾರ್ಕ್ ವೈಡ್ ಮತ್ತು ಬೌಂಡರಿ ನೀಡಿದರು. ಜಿಮ್ಮಿ ನೀಶಾಮ್ ರನೌಟ್ ಆಗುತ್ತಿದ್ದಂತೆ ಸೋಲೊಪ್ಪಿಕೊಳ್ಳಬೇಕಾಯಿತು.