ಬೆಂಗಳೂರು: ಕೆಲ ದಿನಗಳ ಹಿಂದೆ ಟೊಮೊಟೋ ಬೆಲೆ ಡಬಲ್ ಸೆಂಚುರಿ ಬಳಿಗೆ ಹೋಗಿ ಗ್ರಾಹಕರನ್ನು ಸುಸ್ತುಗೊಳಿಸಿತ್ತು. ಜನ ಟೊಮೊಟೋ ಸಹವಾಸ ಬೇಡಪ್ಪಾ ಎನ್ನುವಂತೆ ಮಾಡಿತ್ತು. ಇದೀಗ ಈರುಳ್ಳಿ ಸರದಿ. ಮಳೆಯಿಲ್ಲದೇ ಈರುಳ್ಳಿ ಬೆಳೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿ ಬೆಲೆ ಗಗನಕ್ಕೆ ಏರುತ್ತಿದೆ.
ಕಳೆದ ವಾರವಷ್ಟೇ 100 ರೂ.ಗೆ 3-4 ಕೆಜಿ ಈರುಳ್ಳಿ ದೊರೆಯುತ್ತಿತ್ತು. ಈಗ 70 ರಿಂದ 80 ರೂ.ಗೆ ಬೆಲೆ ಏರಿಕೆಯಾಗಿದೆ. ಕಳೆದ ವಾರ ಕೆಜಿಗೆ 30 ರಿಂದ 40 ರೂ. ಇದ್ದ ಈರುಳ್ಳಿ ಬೆಲೆ ಈಗ 70 ರಿಂದ 80 ರೂ. ಆಗಿದೆ.
ಬೆಂಗಳೂರಿಗೆ ರಾಜ್ಯದ ನಾನಾ ಭಾಗದಿಂದ ಮತ್ತು ಮಹಾರಾಷ್ಟ್ರ, ಆಂಧ್ರ, ಗುಜಾರಾತ್‌ನಿಂದ ಈರುಳ್ಳಿ ಲೋಡ್ ಬರುತ್ತಿತ್ತು. ಇದು ಈರುಳ್ಳಿ ಸೀಸನ್. ಈ ಟೈಮ್‌ಗೆ ಪ್ರತಿನಿತ್ಯ 1,000 ಲಾರಿ ಲೋಡ್ ಬರುತ್ತಿತ್ತು. ಮಳೆಯಾಗದ ಕಾರಣ ಬೆಳೆ ಬಂದಿಲ್ಲ. ಹಾಗಾಗಿ ಪ್ರತಿನಿತ್ಯ 250 ರಿಂದ 300 ಲೋಡ್ ಅಷ್ಟೇ ಬರುತ್ತಿದೆ. ಎಪಿಎಂಸಿಯಲ್ಲೇ (APMC) ಹೋಲ್ ಸೇಲ್ ಬೆಲೆ ಒಳ್ಳೆಯ ಈರುಳ್ಳಿಗೆ 60ರಿಂದ 65 ರೂ. ಆಗಿದೆ. ಮಾರ್ಕೆಟ್‌ನಲ್ಲಿ 70 ರಿಂದ 80 ರೂ. ಆಗುತ್ತಿದೆ ಎಂದು ಎಂಪಿಎಂಸಿಯ ವರ್ತಕರು ಹೇಳುತ್ತಿದ್ದಾರೆ.
ದೇಶಾದ್ಯಂತ ಈರುಳ್ಳಿ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಹೊರೆಯಾಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡಲು ನಿರ್ಧರಿಸಿದೆ. ಯಾವ ರಾಜ್ಯಗಳಲ್ಲಿ ಈರುಳ್ಳಿ ದರ ಭಾರೀ ಏರಿಕೆ ಕಂಡಿದೆಯೋ ಅಲ್ಲೆಲ್ಲ ಕೇಂದ್ರದ ಬಳಿ ಇರುವ ದಾಸ್ತಾನಿನಿಂದ ಈರುಳ್ಳಿ ಸರಬರಾಜು ಮಾಡಿ ರಿಯಾಯಿತಿ ದರದಲ್ಲಿ ಅಂದರೆ ಕೆಜಿಗೆ 25ರೂ.ನಂತೆ ಮಾರಾಟ ಮಾಡಲು ನಿರ್ಧರಿಸಲಾಗಿದೆ.
ನವೆಂಬರ್‌ನಲ್ಲಿ ಈರುಳ್ಳಿ ಬೆಲೆ ಹೆಚ್ಚಿನ ಮಟ್ಟದಲ್ಲೇ ಇರುವ ನಿರೀಕ್ಷೆ ಇದೆ. ಆದರೆ ಡಿಸೆಂಬರ್‌ನಲ್ಲಿ ಹೊಸ ಖಾರಿಫ್ ಬೆಳೆ ಬರುವುದರಿಂದ ಬೆಲೆ ಇಳಿಕೆಯಾಗುವ ಸಂಭವ ಇದೆ. ಡಿಸೆಂಬರ್‌ನಲ್ಲಿ ಗುಜರಾತಿನಿಂದ ಈರುಳ್ಳಿ ಸರಬರಾಜು ಆಗಲಿದೆ. ಅಲ್ಲಿವರೆಗೆ ಈರುಳ್ಳಿ ಬೆಲೆ ಸೆಂಚುರಿ ಮೇಲೆ ಸೆಂಚುರಿ ಬಾರಿಸಿದರೂ ಅಚ್ಚರಿಯಿಲ್ಲ.