ಕೊಚ್ಚಿ: ಇಸ್ರೇಲ್ ವಿರುದ್ಧ ಸಮರ ಸಾರಿರುವ ಹಮಾಸ್ ಉಗ್ರ ನಾಯಕನೊಬ್ಬ ಕೇರಳದ ಮಲಪ್ಪುರಂನಲ್ಲಿ ಆಯೋಜಿಸಿದ್ದ ಪ್ಯಾಲೇಸ್ತೀನ್ ಪರವಾದ ರ್‍ಯಾಲಿಯಲ್ಲಿ ವರ್ಚುವಲ್ ಆಗಿ ಗಾಜಾದಿಂದಲೇ ಭಾಷಣ ಮಾಡಿದ್ದಾನೆ ಎಂದು ಕೇರಳ ಬಿಜೆಪಿ ಆರೋಪಿಸಿದೆ.
ಕೇರಳದ ಮಲಪ್ಪುರಂನಲ್ಲಿ ಶುಕ್ರವಾರ ಪ್ಯಾಲೆಸ್ಟೈನ್ ಪರವಾಗಿ ಜಮಾತೆ ಇಸ್ಲಾಮಿಯ ಯುವ ಘಟಕವಾದ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಹಮಾಸ್ ನಾಯಕ ಖಲೀದ್ ಮಶಾಲ್ ವರ್ಚುವಲ್ ಮೂಲಕ ಪಾಲ್ಗೊಂಡಿದ್ದ ಬಗ್ಗೆ ಕೇರಳ ಬಿಜೆಪಿ ಘಟಕ ಹೇಳಿದೆ.
ಉಗ್ರಗಾಮಿ ಸಂಘಟನೆಯೊಂದಿಗೆ ಇಸ್ರೇಲ್ ನಡೆಸುತ್ತಿರುವ ಯುದ್ಧದ ವಿರುದ್ಧ ರಾಜ್ಯದಲ್ಲಿ ಇಸ್ಲಾಮಿಸ್ಟ್ ಗುಂಪು ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರಲ್ಲಿ ಹಮಾಸ್‌ನ ಖಲೀದ್ ಮಶಾಲ್ ವರ್ಚುವಲ್ ಆಗಿ ಭಾಗವಹಿಸಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದ್ದಾರೆ.
ಮಶಾಲ್ ಭಾಗವಹಿಸಿದ್ದ ಪೋಸ್ಟರ್ ಅನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ”ಸಾಂಪ್ರದಾಯಿಕವಾಗಿ ಜಾತ್ಯತೀತ ನೆಲೆಯಾದ ಕೇರಳದಲ್ಲಿ ಪರಿಸ್ಥಿತಿ ಈ ಮಟ್ಟಕ್ಕೆ ತಲುಪಿದೆ” ಎಂದು ಬರೆದುಕೊಂಡಿದ್ದಾರೆ.
”ಹಮಾಸ್‌ನ ಭಯೋತ್ಪಾದಕ ನಾಯಕ ಸ್ವತಃ ರಾಜ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇದು ವರ್ಚುವಲ್ ಭಾಗವಹಿಸುವಿಕೆಯಾಗಿದೆ. ಏಕೆಂದರೆ, ಅವರಿಗೆ ವೀಸಾ ಪಡೆಯಲು ಆಗಿಲ್ಲ. ಸಂಘಟಕರ ಉದ್ದೇಶಗಳು ಸ್ಪಷ್ಟವಾಗಿವೆ.” ಎಂದು ಸುರೇಂದ್ರನ್ ಹೇಳಿದ್ದು, ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಕೇರಳ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳಿಗೆ ಒತ್ತಾಯಿಸಿದ್ದಾರೆ.