ಲಕ್ನೋ : ಭಾನುವಾರ ಭಾರತ ಹಾಗೂ ಇಂಗ್ಲೆಂಡ್ ನಡುವೆ ವಿಶ್ವ ಕಪ್ ಪಂದ್ಯ ನಡೆಯುತ್ತಿದೆ. ಟಾಸ್ ಸೋತಿರುವ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿದೆ.
ಆಡುವ ಸಂದರ್ಭ ಭಾರತೀಯ ಆಟಗಾರರು ತಮ್ಮ ಎಡಗೈಗಳ ಸುತ್ತಲೂ ಕಪ್ಪು ಪಟ್ಟಿಗಳನ್ನು ಧರಿಸಿರುವುದು ಗಮನಕ್ಕೆ ಬಂದಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಬಗ್ಗೆ ಕಾರಣವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ.
ಭಾರತೀಯ ಕ್ರಿಕೆಟ್ ದಂತಕಥೆ ಬಿಷನ್ ಸಿಂಗ್ ಬೇಡಿ ಅವರ ನಿಧನಕ್ಕೆ ಸಂತಾಪ ಸೂಚಿಸುವ ಸಲುವಾಗಿ ಟೀಂ ಇಂಡಿಯಾ ಆಟಗಾರರು ಕಪ್ಪುಪಟ್ಟಿ ಧರಿಸಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ವಯೋಸಹಜ ಅನಾರೋಗ್ಯದಿಂದ ಬೇಡಿ ಅ.23 ರಂದು ದೆಹಲಿಯಲ್ಲಿ ನಿಧನರಾಗಿದ್ದರು. ಅವರು ಭಾರತಕ್ಕಾಗಿ 1967 ಮತ್ತು 1979ರ ನಡುವೆ 67 ಟೆಸ್ಟ್‍ಗಳನ್ನು ಆಡಿದ್ದರು. ಅವುಗಳಲ್ಲಿ 22ರಲ್ಲಿ ನಾಯಕತ್ವ ವಹಿಸಿದ್ದರು. ಅದರಲ್ಲಿ ಒಟ್ಟು 266 ವಿಕೆಟ್‍ಗಳನ್ನು ಗಳಿಸಿದ್ದರು. ತಮ್ಮ 12 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 10 ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿ 7 ವಿಕೆಟ್‍ಗಳನ್ನು ಪಡೆದಿದ್ದಾರೆ.
ಅಮೃತಸರದಲ್ಲಿ 1946ರ ಸೆಪ್ಟೆಂಬರ್ 25 ರಂದು ಜನಿಸಿದ ಬೇಡಿ ಭಾರತದ ಮೊದಲ ಏಕದಿನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 370 ಪ್ರಥಮ ದರ್ಜೆ ಪಂದ್ಯಗಳಲ್ಲಿ 1,560 ವಿಕೆಟ್ ಪಡೆದಿದ್ದಾರೆ. ದೇಶೀಯ ಲೀಗ್‍ನಲ್ಲಿ ದೆಹಲಿ ಪರ ಸಿಂಗ್ ಆಡಿದ್ದರು.