ನವದೆಹಲಿ: ಹಮಾಸ್ ಬಂಡುಕೋರರ ಹಾಗೂ ಇಸ್ರೇಲ್ ನಡುವಿನ ಯುದ್ಧ ಮುಂದುವರೆದಿದೆ. ಗಾಜಾ ಪಟ್ಟಿಯ ಸ್ವಾಧೀನಕ್ಕೆ ಮುಂದಾಗಿರುವ ಇಸ್ರೇಲ್‌ಗೆ ಹಮಾಸ್ ರಚಿಸಿಕೊಂಡಿರುವ ಸುರಂಗಗಳು ಭಾರಿ ಅಡ್ಡಿಯಾಗಿವೆ. ಹಮಾಸ್ ಉಗ್ರರನ್ನು ಮಟ್ಟ ಹಾಕಲು ಇಸ್ರೇಲ್ ಹೊಸ ತಂತ್ರ ರೂಪಿಸಿದೆ. ಹೌದು, ಇಸ್ರೇಲ್ ಸೇನೆ, ‘ಸ್ಪಾಂಜ್ ಬಾಂಬ್’ಗಳನ್ನು ಬಳಸಿ, ಹಮಾಸ್ ಬಂಡುಕೋರರನ್ನು ಮಟ್ಟ ಹಾಕಲು ಸಿದ್ಧತೆ ನಡೆಸಿದೆ.
ಹಮಾಸ್‌ನ ಈ ಸುರಂಗ ಜಾಲದ ವಿರುದ್ಧ ಹೋರಾಡಲು ಇಸ್ರೇಲ್ ಸ್ಪಾಂಜ್ ಬಾಂಬ್‌ಗಳನ್ನು ಬಳಸುತ್ತಿದೆ. ಈ ಬಾಂಬ್‌ಗಳು ಹಠಾತ್ ಬುರುಗು ಸೃಷ್ಟಿಸಿ, ವೇಗವಾಗಿ ಆಕ್ರಮಿಸಿಕೊಳ್ಳುತ್ತವೆ ಮತ್ತು ಅಷ್ಟೇ ವೇಗದಲ್ಲಿ ವಾಪಸ್ ಗಟ್ಟಿಯಾಗುತ್ತವೆ. ಹಮಾಸ್ ಗುಂಪು ತನ್ನ ಕಾರ್ಯಾಚರಣೆಗಾಗಿ ಬಳಸುತ್ತಿರುವ ಸುರಂಗ ಪ್ರವೇಶದ್ವಾರಗಳನ್ನು ಮುಚ್ಚಲು ಇಸ್ರೇಲ್ ಸ್ಪಾಂಜ್ ಬಾಂಬ್‌ಗಳನ್ನು ಬಳಸುತ್ತಿದೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.
ಏನಿದು ಸ್ಪಾಂಜ್ ಬಾಂಬ್?
ಸ್ಪಂಜಿನ ಬಾಂಬ್ ಎಂದ ಮಾತ್ರಕ್ಕೆ ಇದು ಸ್ಫೋಟ ಆಗುವ ವಸ್ತುವಲ್ಲ. ಬದಲಿಗೆ ಇದೊಂದು ರೀತಿಯ ರಾಸಾಯನಿಕ ಗ್ರೆನೇಡ್ ಸ್ಫೋಟಕ. ಲೋಹದ ತಡೆಗೋಡೆಯೊಂದಿಗೆ ರಕ್ಷಣಾತ್ಮಕ ಪ್ಲಾಸ್ಟಿಕ್ ಕವಚದಲ್ಲಿ ಇಡಲಾಗಿರುತ್ತದೆ. ಸಕ್ರಿಯಗೊಳಿಸಿದ ನಂತರ, ಈ ದ್ರವಗಳು ಸಂಯೋಜಿಸುತ್ತವೆ ಮತ್ತು ಅವುಗಳ ಗೊತ್ತುಪಡಿಸಿದ ಗುರಿಯತ್ತ ಚಲಿಸುತ್ತವೆ. ಹಮಾಸ್ ಉಗ್ರರ ಸುರಂಗಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಗುರುತಿಸಿ, ಈ ದ್ವಾರಗಳ ಬಳಿ ಸ್ಪಂಜಿನ ಬಾಂಬ್ ಸ್ಫೋಟಿಸೋದು ಇಸ್ರೇಲ್ ಗುರಿ.
2021ರಲ್ಲಿ ಗಾಜಾ ಗಡಿಯ ಸಮೀಪ ಸಿಮ್ಯುಲೇಟೆಡ್ ಸುರಂಗ ವ್ಯವಸ್ಥೆ ದ್ವಾರ ಬಂದ್ ಮಾಡಲು ಇಸ್ರೇಲ್ ರಕ್ಷಣಾ ಪಡೆಗಳು ಈ ಸ್ಪಾಂಜ್ ಬಾಂಬ್ ಬಳಸಿ, ಪರೀಕ್ಷಿಸಿದ್ದವು.
ಹಮಾಸ್, ಗಾಜಾಪಟ್ಟಿಯಲ್ಲಿ 1990ರ ಮಧ್ಯ ಭಾಗದಲ್ಲೇ ಸುರಂಗಗಳನ್ನು ಕೊರೆಯಲು ಶುರು ಮಾಡಿತ್ತು. 2006ರಲ್ಲಿ ಗಾಜಾ ಪಟ್ಟಿಯಲ್ಲಿ ಅಧಿಕಾರಕ್ಕೆ ಬಂದ ಮೇಲೆ ಈ ಪ್ರಕ್ರಿಯೆಯನ್ನು ಪೂರೈಸಲು ಅವರಿಗೆ ಮತ್ತಷ್ಟು ಸರಳವಾಯಿತು. ನೆಲದಿಂದ ಆಕ್ರಮಣ ಮಾಡುತ್ತಿರುವ ಇಸ್ರೇಲ್ ಪಡೆಗಳಿಗೆ ಹಮಾಸ್ ಬಂಡುಕೋರರು ಈ ಸುರಂಗ ಮಾರ್ಗದ ಮೂಲಕ ಅಚ್ಚರಿ ರೀತಿಯಲ್ಲಿ ಪ್ರತಿ ದಾಳಿ ಮಾಡುತ್ತಿದ್ದಾರೆ. ಈ ಸುರಂಗಗಳ ಪ್ರವೇಶದ್ವಾರವನ್ನು ಮುಚ್ಚಿದರೆ ಅವರಿಗೆ ದಾಳಿ ಮಾಡಲು ಸಾಧ್ಯವಾಗುವುದಿಲ್ಲ. ಆ ಕೆಲಸಕ್ಕಾಗಿ ಈ ಸ್ಪಾಂಜ್ ಬಾಂಬ್ ಬಳಸಲಾಗುತ್ತಿದೆ.
ಸದ್ಯದ ಮಟ್ಟಿಗೆ ಗಾಜಾಪಟ್ಟಿಯಲ್ಲಿ 80 ಮೀಟರ್ ಆಳದಲ್ಲಿ ಸುಮಾರು 500 ಕಿ. ಮೀ. ದೂರದ ಸುರಂಗ ಸಂಪರ್ಕ ವ್ಯವಸ್ಥೆ ಇದೆ. 360 ಚದರ ಕಿ. ಮೀ. ಪ್ರದೇಶದಲ್ಲಿ ಈ ಸುರಂಗಗಳು ವ್ಯಾಪಿಸಿವೆ. ಅಲ್ಲಲ್ಲಿ ನೆಲದಾಳದಲ್ಲೇ ಭೂಗತ ನಗರಗಳೂ ಇವೆ ಎಂದು ಹೇಳಲಾಗುತ್ತಿದೆ.