ಲಕ್ನೋ: ತನ್ನ ಇಚ್ಛೆಗೆ ವಿರುದ್ಧವಾಗಿ ಕಣ್ಣಿನ ಹುಬ್ಬುಗಳಿಗೆ ಆಕಾರ ನೀಡಿದ್ದಕ್ಕಾಗಿ ಪತಿಯು ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಸೌದಿ ಅರೇಬಿಯಾದಿಂದ ವಿಡಿಯೋ ಕಾಲ್ ಮಾಡಿ ಪತಿ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ. ಅಕ್ಟೋಬರ್ 4 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಪತ್ನಿ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಅತ್ತೆಯಂದಿರಿಂದ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಮುಸ್ಲಿಂ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
2022ರ ಜನವರಿಯಲ್ಲಿ ಪ್ರಯಾಗರಾಜ್‌ನ ಮೊಹಮ್ಮದ್ ಸಲೀಂ ಅವರನ್ನು ಸಂತ್ರಸ್ಥೆ ವಿವಾಹವಾಗಿದ್ದರು. ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಸಲೀಂ, ಮಹಿಳೆಗೆ ಅವರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗ ಆಕೆಯ ಹುಬ್ಬುಗಳನ್ನು ಗಮನಿಸಿ ತನ್ನ ಅನುಮತಿ ಪಡೆಯದೇ ಯಾಕೆ ಹುಬ್ಬುಗಳಿಗೆ ಆಕಾರ ನೀಡಿದ್ದೀಯಾ ಎಂದು ಕೇಳಿದ್ದಾನೆ.
ನಂತರ ಕೋಪಗೊಂಡ ಆತ ಪತ್ನಿಗೆ ತ್ರಿವಳಿ ತಲಾಖ್ ಅನ್ನು ನೀಡಿ, ಅವಳು ಏನು ಬೇಕಾದರೂ ಮಾಡಲು ಸ್ವತಂತ್ರಳು ಎಂದು ಹೇಳಿದ್ದಾನೆ.
ನಂತರ ಆಕೆ ಸಲೀಂ ಹಾಗೂ ಅತ್ತೆ ಮತ್ತು ಇತರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತಿ ವಿರುದ್ಧ ಕ್ರೌರ್ಯ ಮತ್ತು ವರದಕ್ಷಿಣೆ ಆರೋಪ ಹೊರಿಸಲಾಗಿದೆ.
ತ್ರಿವಳಿ ತಲಾಖ್ ಪದ್ಧತಿಯನ್ನು 2019ರಲ್ಲಿ ದೇಶದಲ್ಲಿ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಲಾಗಿದೆ.
.