WORLDCUP 2023 : ಶ್ರೀಲಂಕಾ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಸಾರ್ವಾಂಗೀಣ ಪ್ರದರ್ಶನ ತೋರಿದ ಭಾರತ 302 ರನ್‌ಗಳ ಭಾರಿ ಗೆಲವು ದಾಖಲಿಸಿ ಸೆಮಿಫೈನಲ್‌ಗೆ ಭರ್ಜರಿ ಎಂಟ್ರಿ ನೀಡಿದೆ. ಈ ಗೆಲುವು ಮೂಲಕ ಭಾರತ ಅಂಕ ಪಟ್ಟಿಯಲ್ಲಿ ಅಜೇಯವಾಗಿ ಮತ್ತೆ ಅಗ್ರಸ್ಥಾನ ಅಲಂಕರಿಸಿದೆ.
ವಾಂಖೇಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ಗೆಲುವಿಗೆ ಭಾರತ 358 ರನ್ ಗಳ ಬೃಹತ್ ಗುರಿ ನೀಡಿತ್ತು.
ಆದರೆ ಗುರಿ ಬೆನ್ನತ್ತಿದ ಶ್ರೀಲಂಕಾ ಹೀನಾಯ ಸೋಲು ಕಂಡಿದೆ.
ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಬೌಲಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಗೆ ಇಳಿದ ಭಾರತದ ನಾಯಕ ರೋಹಿತ ಶರ್ಮಾ ಕೇವಲ 4 ರನ್ ಗೆ ಬೌಲ್ಡ್ ಆದರು. ರೋಹಿತ್ ವಿಕೆಟ್ ಪತನದ ಬಳಿಕ ಒಂದಾದ ಶುಬ್ ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಜೋಡಿ 179 ರನ್ ಗಳ ಭರ್ಜರಿ ಜೊತೆಯಾಟ ನೀಡಿದರು.
ಶುಬ್ ಮನ್ ಗಿಲ್ 92 ರನ್ ಬಾರಿಸಿದರೆ ವಿರಾಟ್ ಕೊಹ್ಲಿ 11 ಬೌಂಡರಿ ಸಹಾಯದಿಂದ 88 ರನ್ ಗಳಿಸಿ ಔಟಾಗುವುದರ ಮೂಲಕ ಶತಕ ವಂಚಿತರಾದರು. ಕೆಎಲ್ ರಾಹುಲ್ 21 ರನ್, ಸೂರ್ಯಕುಮಾರ್ ಯಾದವ್ 12 ರನ್ ಗಳಿಸಿದರೆ, ಶ್ರೇಯಸ್ ಐಯ್ಯರ್ 88 ರನ್ ಬಾರಿ ಶತಕದ ಆಸೆ ನಿರಾಸೆಗೊಳಿಸಿದರು. ಕೊನೆಯಲ್ಲಿ ರವೀಂದ್ರ ಜಡೇಜ 34 ಮುಹಮ್ಮದ್ ಶಮಿ 2, ಬುಮ್ರಾ 1 ರನ್ ಸೇರಿಸಿದರು.
ಭಾರತದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ದಿಲ್ಕನ್ ಮಧುಶಂಕ 5 ವಿಕೆಟ್, ದುಶ್ಯಂತ ಚಮೀರ ಒಂದು ವಿಕೆಟ್ ಪಡೆದರು.
ಭಾರತ ನೀಡಿದ ಗುರಿ ಬೆನ್ನತ್ತಿದ ಶ್ರೀಲಂಕಾ ಮೊದಲ ಎಸೆತದಿಂದಲೇ ಕುಸಿತಕ್ಕೆ ನಾಂದಿ ಹಾಡಿತು. ಮೊದಲ ಪವರ್ ಪ್ಲೇ ಒಳಗೆ ಲಂಕಾದ ಅರ್ಧ ಬ್ಯಾಟಿಂಗ್ ಪಡೆಯೇ ಪೆವಿಲಿಯನ್ ಸೇರಿಕೊಂಡಿತು. ಅಂತಿಮವಾಗಿ 19.4 ಓವರ್‌ಗಳಲ್ಲಿ 55 ರನ್ ಗಳಿಸಿ ಶ್ರೀಲಂಕಾ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.
ಭಾರತ ಪರ ಘಾತಕ ದಾಳಿ ಸಂಘಟಿಸಿದ ಶಮಿ 5 ವಿಕೆಟ್ ಪಡೆದರೆ, ಸಿರಾಜ್ 3 ಹಾಗೂ ಬುಮ್ರಾ ಮತ್ತು ಜಡೇಜಾ ತಲಾ 1 ವಿಕೆಟ್ ಪಡೆದರು.