ಭೋಪಾಲ್ : ಮಿದುಳಿನ ಸೂಕ್ಷ್ಮ ಪ್ರದೇಶದಲ್ಲಿ ಬೆಳೆದಿದ್ದ ಗಡ್ಡೆಯನ್ನು ತೆಗೆಯುವ ಶಸ್ತ್ರ ಚಿಕಿತ್ಸೆಯ ವೇಳೆ ರೋಗಿ ಎಚ್ಚರವಾಗಿರಲು ಮಾಡಿದ ಪ್ರಯತ್ನ ಯಶಸ್ವಿಯಾಗಿದೆ. ಹೌದು, ಅದೊಂದು ಶಸ್ತ್ರ ಚಿಕಿತ್ಸೆ, ರೋಗಿಗೆ ಅನಸ್ತೀಷಿಯಾ ನೀಡುವಂತಿರಲಿಲ್ಲ. ರೋಗಿ ಪ್ರಜ್ಞಾವಸ್ಥೆಯಲ್ಲೇ ಇರಬೇಕು. ಜೊತೆಗೆ ವೈದ್ಯರ ಸೂಚನೆಗಳಿಗೆ ಪ್ರತಿಕ್ರಿಯೆಯನ್ನೂ ನೀಡಬೇಕಿತ್ತು. ಹೀಗಾಗಿ, ವೈದ್ಯರು ಹೊಸ ಯೋಜನೆ ರೂಪಿಸಿದ್ದರು.
ಮಧ್ಯ ಪ್ರದೇಶದ ಭೋಪಾಲ್‌ನ ಏಮ್ಸ್ ಆಸ್ಪತ್ರೆ ವೈದ್ಯರು ಈ ವಿನೂತನ ಕಾರ್ಯ ಮಾಡಿದ್ದಾರೆ. ಮಿದುಳಿನ ಶಸ್ತ್ರ ಚಿಕಿತ್ಸೆ ನೆರವೇರಿಸುವ ವೇಳೆ ಆಪರೇಷನ್ ಥಿಯೇಟರ್‌ನಲ್ಲಿ ರೋಗಿ ಪಿಯಾನೋ ಬಾರಿಸುತ್ತಿದ್ದ ಅಲ್ಲದೃ, ಅದರೊಂದಿಗೆ ಆತ ಹನುಮಾನ್ ಚಾಲೀಸಾ ಪಠಿಸುತ್ತಿದ್ದ.
ಬಿಹಾರ ರಾಜ್ಯದ ಬುಕ್ಸಾರ್ ನಿವಾಸಿ 28 ವರ್ಷದ ಯುವಕನಿಗೆ ವೈದ್ಯರು ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ. ಆತನ ಮಿದುಳಿನ ಒಳಗೆ ಗಡ್ಡೆ ರೂಪುಗೊಂಡಿತ್ತು. ಆತ ಇನ್ನೂ ಯುವಕನಾದ ಕಾರಣ ಈ ಸೂಕ್ಷ್ಮ ಶಸ್ತ್ರ ಚಿಕಿತ್ಸೆ ನಡೆಸುವ ವೇಳೆ ವೈದ್ಯರು ಹಲವು ರೀತಿಯಲ್ಲಿ ಸಿದ್ದತೆ ನಡೆಸಿಕೊಂಡಿದ್ದರು. ಅತಿ ಕಡಿಮೆ ಅಪಾಯ ಸಾಧ್ಯತೆಗಳ ಜೊತೆಗೆ ಈ ಆಪರೇಷನ್ ಮುಗಿಸಬೇಕು ಅನ್ನೋದು ವೈದ್ಯರ ನಿಲುವಾಗಿತ್ತು.
ವೀಡಿಯೋ ವೈರಲ್:
ಈ ಸೂಕ್ಷ್ಮ ಶಸ್ತ್ರ ಚಿಕಿತ್ಸೆಯ ವಿಡಿಯೋ ಕೂಡಾ ಇದೀಗ ವೈರಲ್ ಆಗುತ್ತಿದೆ. ಆಪರೇಷನ್ ಥಿಯೇಟರ್‌ನ ಬೆಡ್ ಮೇಲೆ ಮಲಗಿದ್ದ ವ್ಯಕ್ತಿ ಮೊದಲಿಗೆ ಕೆಲ ಸಮಯ ಪಿಯಾನೋ ಬಾರಿಸುತ್ತಾನೆ. ಜೊತೆಗೆ ಆಪರೇಷನ್ ನಡೆಯುತ್ತಿದ್ದರೂ ಕೂಡಾ ರೋಗಿ ಯಾವುದೇ ಮಾನಸಿಕ ಒತ್ತಡದಲ್ಲಿ ಇರೋದಿಲ್ಲ. ವೈದ್ಯರೂ ಕೂಡಾ ರೋಗಿ ಜೊತೆ ನಿರಂತರವಾಗಿ ಮಾತನಾಡುತ್ತಿರುತ್ತಾರೆ. ಇದಾದ ಕೆಲ ಸಮಯಕ್ಕೆ ರೋಗಿ ದಿನ ಪತ್ರಿಕೆ ಓದುತ್ತಾನೆ. ನಂತರ ಹನುಮಾನ್ ಚಾಲೀಸಾ ಸೇರಿದಂತೆ ಹಲವು ಮಂತ್ರಗಳನ್ನೂ ಪಠಿಸುತ್ತಾನೆ!
ರೋಗಿಯು ಪಿಯಾನೋ ಬಾರಿಸುತ್ತಿರುವಾಗಲೇ ಆತನ ಮಿದುಳಿನ ಒಳಗಿದ್ದ ಗಡ್ಡೆಯನ್ನು ಹೊರ ತೆಗೆದೆವು ಎಂದು ವೈದ್ಯರು ಹೇಳಿದ್ದಾರೆ. ಆ ಬಳಿಕ ರೋಗಿ ಹನುಮಾನ್ ಚಾಲೀಸಾ ಸೇರಿದಂತೆ ಹಲವು ಮಂತ್ರಗಳನ್ನು ಪಠಿಸಿದ್ದಾನೆ. ಸದ್ಯ ರೋಗಿಯ ಮಿದುಳಿನಲ್ಲಿ ಇದ್ದ ಎಲ್ಲ ಗಡ್ಡೆಗಳನ್ನೂ ತೆಗೆಯಲಾಗಿದ್ದು, ಆತ ಚೇತರಿಕೆ ಕಾಣುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಮಂತ್ರಗಳನ್ನು ಪಠಿಸುತ್ತಿದ್ದ ರೋಗಿಯ ದೇಹದಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳೂ ಕಂಡು ಬಂದಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಸಾಮಾನ್ಯವಾಗಿ ಮಿದುಳಿನ ಶಸ್ತ್ರ ಚಿಕಿತ್ಸೆ ನಡೆಸುವಾಗ ರೋಗಿಗಳನ್ನು ಪ್ರಜ್ಞಾವಸ್ಥೆಯಲ್ಲೇ ಇರಿಸಿ ಶಸ್ತ್ರ ಚಿಕಿತ್ಸೆ ನಡೆಸುತ್ತಾರೆ. ಕಳೆದ ಕೆಲವು ವರ್ಷಗಳಿಂದ ಈ ಪರಿಪಾಠ ರೂಢಿಯಲ್ಲಿದೆ. ಈ ಪ್ರಕರಣದಲ್ಲಿ ಭೋಪಾಲ್‌ನ ಏಮ್ಸ್ ಆಸ್ಪತ್ರೆ ವೈದ್ಯರು ಯಾವುದೇ ಕಾರಣಕ್ಕೂ ರೋಗಿ ಪ್ರಜ್ಞೆ ತಪ್ಪದಂತೆ ಎಚ್ಚರ ವಹಿಸಿದ್ದರು. ಆತನಿಗೆ ಬೋರ್ ಆಗದಂತೆ, ನಿದ್ರೆ ಬಾರದಂತೆ ನೋಡಿಕೊಂಡರು. ಆತನ ಇಷ್ಟದ ಪಿಯಾನೋ ಬಾರಿಸುವ ಅವಕಾಶ ನೀಡಿದರು. ಆಗಾಗ ಮಾತನಾಡಿಸುತ್ತಿದ್ದರು. ಜೊತೆಗೆ ಹನುಮಾನ್ ಚಾಲೀಸಾ ಪಠಿಸಲು ಹೇಳುವ ಮೂಲಕ ಆಪರೇಷನ್ ಯಶಸ್ವಿಗೊಳಿಸಿದ್ದಾರೆ.