ನವದೆಹಲಿ: 2023ರ ಅಂಡರ್ 19 ಏಷ್ಯಾ ಕಪ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಈ ಬಾರಿ ಒಂದೇ ಗುಂಪಿನಲ್ಲಿ ಆಡುತ್ತಿವೆ.
ಈ ಬಾರಿಯ ಅಂಡರ್ 19 ಏಷ್ಯಾಕಪ್ 2023 ಟೂರ್ನಿ ದುಬೈನಲ್ಲಿ ನಡೆಯುತ್ತಿದ್ದು, ಪಂದ್ಯಾವಳಿಯು ಡಿಸೆಂಬರ್ 8 ರಿಂದ ಡಿಸೆಂಬರ್ 17 ರವರೆಗೆ ನಡೆಯಲಿದೆ. ಸಾಂಪ್ರದಾಯಿಕ ಬದ್ದ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಡಿ.10 ರಂದು ಮುಖಾಮುಖಿಯಾಗಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಆಫ್ಘನ್ ವಿರುದ್ಧ ಆಡಲಿದೆ.
8 ತಂಡ, 15 ಪಂದ್ಯ :
ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಎರಡು ಸೆಮಿಫೈನಲ್ ಮತ್ತು ಒಂದು ಫೈನಲ್ ಪಂದ್ಯ ಕೂಡ ಸೇರಿದೆ. ಫೈನಲ್ ಪಂದ್ಯ ಡಿಸೆಂಬರ್ 17 ರಂದು ನಡೆಯಲಿದೆ. ಈ ಟೂರ್ನಿಯ ಪಂದ್ಯಗಳು ಐಸಿಸಿ ಅಕಾಡೆಮಿ ಓವಲ್ ಸೇರಿದಂತೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿವೆ. ಒಟ್ಟು 8 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
ಭಾರತ, ಪಾಕಿಸ್ತಾನ, ಶ್ರೀಲಂಕಾ, ಜಪಾನ್, ಯುಎಇ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ ಎಂಟು ತಂಡಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಹಾಲಿ ಚಾಂಪಿಯನ್ ಭಾರತ, ನೇಪಾಳ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಜಪಾನ್ ಮತ್ತು ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಸ್ಥಾನ ಪಡೆದಿವೆ. ಡಿ.10ರಂದು ಭಾರತ ಪಾಕ್ ಪಂದ್ಯ ನಡೆಯಲಿದೆ.