ಪೋರ್‌ಬಂದರ್ : ವ್ಯಕ್ತಿಯೊಬ್ಬ ತನ್ನ ಪತ್ನಿಯ ಪ್ರಿಯಕರನಿಂದಲೇ ಹತ್ಯೆಗೀಡಾಗಿರುವ ಆಘಾತಕಾರಿ ಘಟನೆ ಗುಜರಾತಿನ ಪೋರ್‌ಬಂದರ್‌ನಲ್ಲಿ ನಡೆದಿದೆ.
ಹತ್ಯೆಗೀಡಾದ ವ್ಯಕ್ತಿಯ ಹೆಸರು ರಾಜು(35) ಎಂದು ಗುರುತಿಸಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಜುವನ್ನು ಕಂಡು ರಾಜು ತಂದೆ ಕೂಡಲೇ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಈ ಘಟನೆಗೆ ತನ್ನ ಸೊಸೆ ಕೃಪಾಲಿ ಹಾಗೂ ಆಕೆಯ ಪ್ರಿಯಕರ ನಿತೇಶ್ ಕಾರಣ ಎಂದು ದೂರಿದರು.
ಇದು ಇನ್ಸ್ಟಾಗ್ರಾಂ ಲವ್ ಸ್ಟೋರಿ :
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾದ ಪೊಲೀಸರಿಗೆ ಶಾಕ್ ಕಾದಿತ್ತು. ಏಕೆಂದರೆ ಮೃತ ರಾಜು ಪತ್ನಿ ಕೃಪಾಲಿಗೆ ಆಕೆಯ ಸಹೋದರ ವಿಶಾಲ್ ನೆರವು ನೀಡಿದ್ದ. ತನ್ನ ಭಾವನನ್ನು ಕೊಲೆ ಮಾಡಲು ಆತ ರಾಜ್‌ಕೋಟ್‌ನಿಂದ ಪೋರ್‌ಬಂದರ್‌ಗೆ ಬಂದಿದ್ದ. ಇದೀಗ ಪೊಲೀಸರು, ಕೃಪಾಲಿ ಪ್ರಿಯಕರ ನಿತೇಶ್ ಹಾಗೂ ಕೃಪಾಲಿಯ ಸಹೋದರ ವಿಶಾಲ್‌ನನ್ನು ಬಂಧಿಸಿದ್ದಾರೆ.
ಪೊಲೀಸರ ತನಿಖೆ ವೇಳೆ ಹಲವು ವಿಚಾರಗಳು ಬಯಲಾದವು. ಕೊಲೆಗೀಡಾದ ರಾಜು 15 ವರ್ಷಗಳ ಹಿಂದೆ ನೀತಾ ಎಂಬುವರನ್ನು ಮದುವೆಯಾಗಿದ್ದ. ಆದರೆ ಈ ದಾಂಪತ್ಯ ಬಹಳ ಸಮಯ ಉಳಿದಿರಲಿಲ್ಲ. ಕೇವಲ ಎರಡು ವರ್ಷಕ್ಕೆ ಈ ದಂಪತಿ ಪರಸ್ಪರ ಸಹಮತದೊಂದಿಗೆ ದೂರವಾಗಿದ್ದರು.
ಇದಾದ ಕೆಲ ವರ್ಷಗಳ ಬಳಿಕ ಅಂದರೆ, 8 ವರ್ಷಗಳ ಹಿಂದೆ ರಾಜುಗೆ ಕೃಪಾಲಿ ಜೊತೆ ಸ್ನೇಹ ಬೆಳೆದಿತ್ತು. ಈ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಇಬ್ಬರೂ ಮದುವೆಯಾಗಿದ್ದರು. ಈ ದಂಪತಿಗೆ 7 ವರ್ಷ ವಯಸ್ಸಿನ ಮಗಳೂ ಇದ್ದಾಳೆ.
ಆದರೆ, ಕಳೆದ ಒಂದು ವರ್ಷದ ಹಿಂದೆ ಕೃಪಾಲಿ ಹಾಗೂ ರಾಜು ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಕಾಲ ಆಕ್ಟೀವ್ ಇರುತ್ತಿದ್ದ ಕೃಪಾಲಿಗೆ ಇನ್‌ಸ್ಟಾ ಗ್ರಾಂನಲ್ಲಿ ನಿತೇಶ್ ಜೊತೆ ಗೆಳೆತನವಾಗಿತ್ತು. ಇವರಿಬ್ಬರ ಗೆಳೆತನ ಪ್ರೇಮಕ್ಕೆ ತಿರುಗಿತ್ತು. ನಿತೇಶ್ ಜೊತೆ ನಂಟು ಮುಂದುವರೆಸಬೇಕು, ಆತನನ್ನು ವಿವಾಹ ಆಗಬೇಕೆಂದು ಬಯಸಿದ್ದ ಕೃಪಾಲಿ, ಅದೊಂದು ದಿನ ತನ್ನ ಗಂಡನನ್ನು ಬಿಟ್ಟು ನಿತೇಶ್ ಜೊತೆಗೆ ಓಡಿ ಹೋಗಿದ್ದಳು. ವೃತ್ತಿಯಲ್ಲಿ ಡ್ರೈವರ್ ಆಗಿದ್ದ ನಿತೇಶ್, ಆಕೆಯನ್ನು ರಾಜ್‌ಕೋಟ್‌ಗೆ ಕರೆದೊಯ್ದಿದ್ದ.
ತನ್ನ ಪತ್ನಿಯನ್ನು ಪ್ರೀತಿ ಮಾಡುತ್ತಿದ್ದ ರಾಜುಗೆ ಇದರಿಂದ ಆಘಾತವಾಗಿತ್ತು. ಆಕೆಯನ್ನು ವಾಪಸ್ ಬರುವಂತೆ ಆತ ಬೇಡಿಕೊಂಡಿದ್ದ. ಆದರೆ ಕೃಪಾಲಿ ಸಹೋದರ ವಿಶಾಲ್‌ಗೆ ತನ್ನ ಅಕ್ಕ ತನ್ನ ಗಂಡನ ಜೊತೆ ವಾಪಸ್ ಹೋಗೋದು ಇಷ್ಟ ಇರಲಿಲ್ಲ. ಆಕೆ ತನ್ನ ಪ್ರಿಯಕರ ನಿತೇಶ್ ಜೊತೆಗೇ ಇರಬೇಕೆಂದು ಆತನೂ ಬಯಸಿದ್ದ. ಆದರೆ, ಅಂತಿಮವಾಗಿ ರಾಜು ಪ್ರೀತಿ ಗೆದ್ದಿತ್ತು. ರಾಜು ಒತ್ತಾಯಕ್ಕೆ ಮಣಿದಿದ್ದ ಕೃಪಾಲಿ ತನ್ನ ಗಂಡನ ಜೊತೆ ವಾಪಸ್ ಪೋರ್‌ಬಂದರ್‌ಗೆ ಹೋಗಿದ್ದಳು.
ಗಂಡನ ಮನೆಗೆ ವಾಪಸ್ ಬಂದ ಮೇಲೂ ಕೃಪಾಲಿ ನಿತೇಶ್ ಜೊತೆ ನಂಟು ಮುಂದುವರೆಸಿದ್ದಳು. ಆದರೆ, ನಿತೇಶ್ ಜೊತೆ ಆಕೆ ಗೆಳೆತನ ಮುಂದುವರೆಸಲು ರಾಜು ಬಿಡುತ್ತಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ನಿತೇಶ್ ಹಾಗೂ ಕೃಪಾಲಿ ಸಹೋದರ ವಿಶಾಲ್ ಸಂಚು ರೂಪಿಸಿದರು. ರಾಜ್‌ಕೋಟ್‌ನಿಂದ ಪೋರ್‌ಬಂದರ್‌ಗೆ ಬಂದ ಇವರಿಬ್ಬರೂ ರಾಜುನನ್ನು ಕೊಲೆಗೈದು ಪರಾರಿಯಾಗಿದ್ದರು.
ರಾಜುಗೆ ಹರಿತವಾಗಿ ಚೂರಿಯಿಂದ ಇರಿದು ಇವರಿಬ್ಬರೂ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬೆಳ್ಳಂಬೆಳಗ್ಗೆ ಮನೆಗೆ ಹಾಲು ತಂದು ಕೊಡುವ ವ್ಯಕ್ತಿ ಮನೆ ಬಾಗಿಲು ತಟ್ಟಿದಾಗ ರಾಜು ಬಾಗಿಲು ತೆಗೆದಿರಲಿಲ್ಲ. ಈ ವೇಳೆ ರಾಜು ತಂದೆ ಮನೆ ಬಾಗಿಲು ತೆಗೆದು ನೋಡಿದಾಗ ತನ್ನ ಮಗ ಕೊಲೆ ಆಗಿರೋದು ಗೊತ್ತಾಗಿತ್ತು.