ಮಂಜೇಶ್ವರ : ಸಿನಿಮೀಯ ರೀತಿಯಲ್ಲಿ ಪ್ರಯಾಣಿಕರಿಗೆ ವ್ಯಕ್ತಿಯೊಬ್ಬರು ಸಹಾಯ ಮಾಡಿರುವ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ನಡೆದಿದೆ.
ಸರ್ಕಾರಿ ಬಸ್ ಸ್ಥಳೀಯ ಪ್ರಯಾಣಿಕರನ್ನು ನಿರ್ಲಕ್ಷಿಸಿ ಸಂಚರಿಸುತ್ತಿದ್ದುದರ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆಯಾಗಿದೆ.
ಮಂಗಳೂರಿನಿಂದ ಕೇರಳಕ್ಕೆ ಹೋಗುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಸರ್ವಿಸ್ ರೋಡ್ಗೆ ಬರದೆ ಆಗಾಗ ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗುತ್ತಿದ್ದುದರಿಂದ ಸ್ಥಳೀಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯ ಉದ್ಯಮಿ ಹುಸೈನಾರ್ ಎನ್ನುವವರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಬಸ್ ಬರುವ ಸಮಯಕ್ಕೆ ಸರಿಯಾಗಿ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಸ್ಟೂಲ್ ಇಟ್ಟು ಅದರ ಮೇಲೆ ಕುಳಿತು ಬಸ್ಗೆ ತಡೆವೊಡ್ಡಿದ ಅವರು, ಬಳಿಕ ಆ ಬಸ್ ಹೆದ್ದಾರಿಯಲ್ಲಿ ಸುಮಾರು ಅರ್ಧ ಕಿಲೋಮೀಟರ್ ದೂರ ರಿವರ್ಸ್ ಹೋಗುವಂತೆ ಮಾಡಿ ನಂತರ ಸರ್ವಿಸ್ ರೋಡ್ ನಲ್ಲಿ ತೆರಳುವಂತೆ ಮಾಡಿದ್ದಾರೆ.
ಈ ಮೂಲಕ ಅವರು ಸ್ಥಳೀಯ ಪ್ರಯಾಣಿಕರಿಗೆ ನೆರವಾಗಿದ್ದು, ಅವರ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಈ ವೀಡಿಯೋ ವೈರಲ್ ಆಗಿದೆ.