ಪ್ರಧಾನಿ ನರೇಂದ್ರ ಮೋದಿ ಈ ಬಾರಿಯೂ ಭಾರತೀಯ ಸೇನೆಯೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದಾರೆ.
ಸೇನಾ ಸಮವಸ್ತ್ರ ಧರಿಸಿದ್ದ ಮೋದಿ ಸೈನಿಕರೊಂದಿಗೆ ಸಂವಾದ ನಡೆಸಿ, ಅವರಿಗೆ ಸಿಹಿ ತಿನಿಸಿ ದೀಪಾವಳಿ ಸಂಭ್ರಮವನ್ನು ಹಂಚಿಕೊಂಡರು.
ಮೋದಿ ಪ್ರಧಾನಿಯಾದ ನಂತರ ಪ್ರತಿ ದೀಪಾವಳಿಯನ್ನು ಸೈನಿಕರೊಂದಿಗೆ ಆಚರಿಸುತ್ತಾರೆ. ಇದು 9ನೇ ಬಾರಿಗೆ ಮೋದಿ ಅವರು ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ.
ಈ ವೇಳೆ ಸೇನೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಎಲ್ಲಿಯವರೆಗೆ ನಮ್ಮ ಸೇನೆ ದೇಶದ ಗಡಿಯಲ್ಲಿ ಹಿಮಾಲಯದಂತೆ ದೃಢವಾಗಿ ನಿಲ್ಲುತ್ತದೆಯೋ ಅಲ್ಲಿಯವರೆಗೂ ಭಾರತ ಸುರಕ್ಷಿತವಾಗಿರಲಿದೆ ಎಂದು ಯೋಧರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾವು ದೇಶದಲ್ಲಿ ಶಾಂತಿಯ ವಾತಾವರಣವನ್ನು ನಿರ್ಮಿಸುತ್ತಿದ್ದೇವೆ. ಇದರಲ್ಲಿ ಸೇನೆಯ ಪಾತ್ರ ಬಹಳ ಮುಖ್ಯವಾಗಿದೆ. ಪ್ರತಿ ವರ್ಷ ನಾನು ನಮ್ಮ ಸೇನಾ ಸಿಬ್ಬಂದಿಯೊಂದಿಗೆ ದೀಪಾವಳಿಯನ್ನು ಆಚರಿಸುತ್ತೇನೆ.. ಅಯೋಧ್ಯೆ ರಾಮನಿರುವ ಸ್ಥಳ ಎಂದು ಅವರು ಹೇಳುತ್ತಾರೆ. ನನಗೆ ಭಾರತೀಯ ಸೇನಾ ಸಿಬ್ಬಂದಿ ಇರುವ ಸ್ಥಳವೇ ಅಯೋಧ್ಯೆ ಎಂದರು.
ಹಿಂದೆ ನಾನು ಪ್ರಧಾನಿ ಮತ್ತು ಸಿಎಂ ಅಲ್ಲದಿದ್ದರೂ ಸಹ ಗಡಿ ಪ್ರದೇಶಗಳಿಗೆ ಹೋಗಿದ್ದೇನೆ, ದೀಪಾವಳಿ ಆಚರಿಸಿದ್ದೇನೆ ಎಂದು ಮೋದಿ ಹೇಳಿದರು.
ಸ್ವಾತಂತ್ರ್ಯಾ ನಂತರ ಸೇನೆ ಹಲವು ಯುದ್ಧಗಳನ್ನು ನಡೆಸಿ ದೇಶದ ಮನ ಗೆದ್ದಿದ್ದು, ಅಂತಾರಾಷ್ಟ್ರೀಯ ಶಾಂತಿ ಯಾತ್ರೆಯಲ್ಲಿ ಸೇನೆಯಿಂದಾಗಿ ಭಾರತದ ಜಾಗತಿಕ ಚಿತ್ರಣ ಹೆಚ್ಚಿದೆ ಎಂದು ಪ್ರಧಾನಿ ಹೊಗಳಿದರು.