ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಗಾಯಗೊಂಡು ಹೊರಗುಳಿದಿದ್ದ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ದಕ್ಷಿಣ ಆಫ್ರಿಕಾ ಮತ್ತು ಆಸ್ಚ್ರೇಲಿಯಾ ವಿರುದ್ಧ ಸರಣಿಗೂ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ವಿಶ್ವಕಪ್ ಟೂರ್ನಿಯ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ಸಂಪೂರ್ಣವಾಗಿ ಟೂರ್ನಿಯಿಂದ ಹೊರಬಿದ್ದಿದ್ದ ಹಾರ್ದಿಕ್ ಪಾಂಡ್ಯ
ಮುಂಬರುವ ಆಸ್ಟ್ರೇಲಿಯಾ (Australia vs India) ಮತ್ತು ದಕ್ಷಿಣ ಆಫ್ರಿಕಾ (South Africa vs India) ವಿರುದ್ಧದ ಸರಣಿಗೂ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿದೆ.
ಗಾಯಗೊಂಡಿದ್ದ ಪಾಂಡ್ಯ :
ಬಾಂಗ್ಲಾದೇಶ ವಿರುದ್ಧ ಅಕ್ಟೋಬರ್ 19ರಂದು ಪುಣೆಯಲ್ಲಿ ನಡೆದಿದ್ದ ಪಂದ್ಯದ 9ನೇ ಓವರ್ ಎಸೆಯಲು ಬಂದ ಹಾರ್ದಿಕ್ ಪಾಂಡ್ಯ ಅವರು ಲಿಟನ್ ದಾಸ್ ಬಾರಿಸಿದ ಬೌಂಡರಿ ತಡೆಯುವ ಯತ್ನದಲ್ಲಿ ಸ್ಲಿಪ್ ಆಗಿ ಕೆಳಗೆ ಬಿದ್ದು ಪಾದದ ಗಾಯಕ್ಕೆ ತುತ್ತಾಗಿ ಮೈದಾನ ತೊರೆದಿದ್ದರು. ಪಾಂಡ್ಯ ಅವರ ಉಳಿದ ಮೂರು ಎಸೆತಗಳನ್ನು ವಿರಾಟ್ ಕೊಹ್ಲಿ ಅವರು ಪೂರ್ಣಗೊಳಿಸಿದ್ದರು. ಗಾಯಗೊಂಡು ಮೈದಾನದಿಂದ ಹೊರ ನಡೆದ ಪಾಂಡ್ಯ ಸಂಪೂರ್ಣವಾಗಿ ಪಂದ್ಯದಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಅವರು ಬದಲಿ ಆಟಗಾರನಾಗಿ ಫೀಲ್ಡಿಂಗ್ ನಡೆಸಿದ್ದರು. ಬಳಿಕ ಮೂರು ಪಂದ್ಯಗಳಿಂದ ಹೊರಗುಳಿದು ಚಿಕಿತ್ಸೆ ಪಡೆದರೂ ಗಾಯದಿಂದ ಚೇತರಿಕೆ ಕಾಣದ ಕಾರಣ ಅಂತಿಮವಾಗಿ ವಿಶ್ವಕಪ್‌ನಿಂದಲೇ ಹೊರಬಿದ್ದರು. ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ತಂಡ ಸೇರಿದ್ದರು.
ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ :
ಭಾರತ ವಿಶ್ವಕಪ್ ಫೈನಲ್ ತಲುಪಿರುವ ಈ ಸುಸಂದರ್ಭದಲ್ಲಿ ಪಾಂಡ್ಯ ಪತ್ರವೊಂದು ಬರೆದಿದ್ದಾರೆ. ಎಕ್ಸ್‌ನಲ್ಲಿ ಈ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.
“ವಿಶ್ವಕಪ್‌ನ ಉಳಿದ ಭಾಗವನ್ನು ನಾನು ಕಳೆದುಕೊಳ್ಳುತ್ತೇನೆ ಎಂಬ ವಿಚಾರವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಆದರೂ ನಾನು ನಮ್ಮ ತಂಡದೊಂದಿಗೆ ಇದ್ದು ಅವರನ್ನು ಹುರಿದುಂಬಿಸುತ್ತೇನೆ. ನನಗೆ ಬೆಂಬಲ ನೀಡಿದ್ದಕ್ಕೆ ಹಾಗೂ ನೀಡುತ್ತಿರುವುದಕ್ಕೆ ಧನ್ಯವಾದಗಳು. ನಮ್ಮ ತಂಡ ವಿಶ್ವಕಪ್ ಎತ್ತಿ ಹಿಡಿಯುತ್ತದೆ ಎಂಬ ವಿಶ್ವಾಸ ನನಗಿದೆ” ಎಂದು ಟ್ವಿಟರ್ ನಲ್ಲಿ ಬರೆದಿದ್ದರು.
ದ.ಆಫ್ರಿಕಾ, ಆಸ್ಟ್ರೇಲಿಯಾ ಸರಣಿ :
ವಿಶ್ವಕಪ್ ಮುಗಿದ ತಕ್ಷಣ ಭಾರತ ತಂಡ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.
ಈ ಸರಣಿ ನವೆಂಬರ್ 22 ರಿಂದ ಡಿಸೆಂಬರ್ 3 ತನಕ ನಡೆಯಲಿದೆ. ಮೊದಲ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಡಿ.10 ರಿಂದ ಟಿ20 ಸರಣಿ ಆರಂಭಗೊಳ್ಳಲಿದೆ. ಡಿ.17ರಿಂದ ಏಕದಿನ, ಡಿ.26ರಿಂದ ಟೆಸ್ಟ್ ಸರಣಿ ನಡೆಯಲಿದೆ. ಜನವರಿ 3 ತನಕ ಈ ಸರಣಿ ಸಾಗಲಿದೆ.
ಇನ್ನು ಈ ಸರಣಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ ಪ್ರೀತ್ ಬುಮ್ರಾ, ಶಮಿ, ರವೀಂದ್ರ ಜಡೇಜಾ ಅವರು ವಿಶ್ರಾಂತಿ ಪಡೆಯಬಹುದು. ಕೆ.ಎಲ್ ರಾಹುಲ್ ಅವರು ನಾಯಕತ್ವ ವಹಿಸಬಹುದು ಎಂದು ಹೇಳಲಾಗುತ್ತಿದೆ.