ಪ್ರಸಕ್ತ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಈಗ ಕ್ಲೈಮ್ಯಾಕ್ಸ್ ತಲುಪಿದೆ. ಆತಿಥೇಯ ಭಾರತ ಹಾಗೂ ಆಸ್ಟ್ರೇಲಿಯಾ ಟ್ರೋಫಿಗಾಗಿ ಸೆಣಸಲಿವೆ. ಈ ಹೈವೋಲ್ಟೇಜ್ ಫೈನಲ್ ಪಂದ್ಯ ನವೆಂಬರ್ 19ರಂದು ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಮಹಾ ಟೂರ್ನಿಗೆ ಆಗಾಗ ಮಳೆ ಕಾಟ ನೀಡಿದೆ. ಹೀಗಾಗಿ ಫೈನಲ್ ವೇಳೆ ಮಳೆ ಸುರಿದರೆ ಪರಿಣಾಮ ಏನು, ಫಲಿತಾಂಶ ನಿರ್ಧಾರ ಹೇಗೆ ಎಂಬುವುದರ ಸಂಕ್ಷಿಪ್ತ ವಿವರಣೆ ಇಲ್ಲಿದೆ.
ಮೀಸಲು ದಿನ
ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯಗಳಿಗೆ ಮೀಸಲು ದಿನ ಇರುವುದಿಲ್ಲ. ಲೀಗ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿ ರದ್ದಾರೆ ಅಂಕ ಹಂಚಲಾಗುತ್ತಿತ್ತು. ಆದರೆ, ನಾಕೌಟ್ ಹಂತದ ಪಂದ್ಯಗಳಿಗೆ ಒಂದು ದಿನ ಮೀಸಲು ಇರಿಸಲಾಗಿದೆ. ನಿಗದಿತ ದಿನ ಮಳೆಗೆ ಆಹುತಿಯಾದರೆ, ಮರು ದಿನ ಪಂದ್ಯ ಅದೇ ಘಟ್ಟದಿಂದ ಮುಂದುವರಿಯುತ್ತದೆ.
ಸೂಪರ್ ಓವರ್
ಕಳೆದ ವಿಶ್ವಕಪ್‌ನಲ್ಲಿ ಇದ್ದ ಬೌಂಡರಿ ಕೌಂಟ್ ನಿಯಮವನ್ನು ಕಿತ್ತೊಗೆಯಲಾಗಿದೆ. ಮಳೆ ಕಾರಣ ಅಥವಾ ಇನ್ನಾವುದೇ ಕಾರಣಕ್ಕೆ ಸ್ಕೋರ್ ಸಮಬಲವಾದರೆ ಫಲಿತಾಂಶ ಸಲುವಾಗಿ ಸೂಪರ್ ಓವರ್ ನಡೆಯಲಿದೆ. ಸೂಪರ್ ಓವರ್ ಕೂಡ ಟೈ ಕಂಡರೆ, ಫಲಿತಾಂಶ ಬರುವರೆಗೂ ಸೂಪರ್ ಓವರ್ ನಡೆಯಲಿದೆ.
ಫೈನಲ್ ರದ್ದಾದರೆ
ಒಂದು ವೇಳೆ ಮಳೆ ಕಾರಣ ಫೈನಲ್ ಪಂದ್ಯ ನಿಗದಿತ ಮತ್ತು ಮೀಸಲು ದಿನವೂ ರದ್ದಾರೆ, ಫೈನಲ್ ತಲುಪಿದ ತಂಡಗಳು ಜಂಟಿ ಚಾಂಪಿಯನ್ಸ್ ಎನಿಸಿಕೊಳ್ಳಲಿವೆ.
2002ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯೂ ನಿಗದಿತ ಮತ್ತು ಮೀಸಲು ದಿನ ಎರಡೂ ದಿನ ಮಳೆ ಕಾಟ ಕೊಟ್ಟ ಪರಿಣಾಮ ಫಲಿತಾಂಶ ಬರಲಿಲ್ಲ. ಹೀಗಾಗಿ ಆ ಫೈನಲ್ ತಲುಪಿದ್ದ ಭಾರತ ಮತ್ತು ಶ್ರೀಲಂಕಾ ತಂಡಗಳು ಜಂಟಿ ಚಾಂಪಿಯನ್ಸ್ ಪಟ್ಟ ಪಡೆದಿದ್ದವು.