ನವದೆಹಲಿ : ಗಾಜಾಗೆ ಬೆಂಬಲ ಪ್ರದರ್ಶಿಸಲು ಹಾಗೂ ಪ್ಯಾಲೆಸ್ತೀನಿಯರ ಪರ ಪ್ರಾರ್ಥನೆ ಸಲ್ಲಿಸಲು ಮೆಕ್ಕಾ ಮತ್ತು ಮದೀನಾ ಪವಿತ್ರ ಸ್ಥಳಗಳಲ್ಲಿ ಸೇರಿದ ವ್ಯಕ್ತಿಗಳನ್ನು ಸೌದಿ ಅರೇಬಿಯಾ ಪೊಲೀಸರು ಬಂಧಿಸುತ್ತಿದ್ದಾರೆಎಂದು ವರದಿಯಾಗಿದೆ.
ಮಿಡ್ಲ್ ಈಸ್ಟ್ ಐ ವರದಿ ಪ್ರಕಾರ, ಬ್ರಿಟಿಷ್ ನಟ ಹಾಗೂ ನಿರೂಪಕ ಇಸ್ಲಾ ಅಬ್ದುರ್ ರೆಹಮಾನ್ ಅವರನ್ನು ಮೆಕ್ಕಾ ಯಾತ್ರೆಯ ಸಂದರ್ಭದಲ್ಲಿ ಪ್ಯಾಲೆಸ್ತೀನ್ ಮುಂಡಾಸು ಮತ್ತು ಪ್ಯಾಲೆಸ್ತೀನ್ ಬಣ್ಣದ ತಸ್ಬಿಹ್ ಕೊಂಡೊಯ್ಯುತ್ತಿದ್ದ ವೇಳೆ ಬಂಧಿಸಲಾಗಿದೆ.
“ನಾನು ತಲೆಗೆ ಬಿಳಿ ಕೆಫಿಯೆಹ್ (ಮುಂಡಾಸು) ಮತ್ತು ಪ್ಯಾಲೆಸ್ತೀನಿ ಬಣ್ಣದ ತಸ್ಬಿಹ್ (ಮುಂಗೈಗೆ ಸುತ್ತುವ ಜಪಮಾಲೆ) ಧರಿಸಿದ್ದಕ್ಕಾಗಿ ನನ್ನನ್ನು ನಾಲ್ವರು ಸೈನಿಕರು ತಡೆದಿದ್ದರು” ಎಂದು ಇಸ್ಲಾ ಅವರು ತಮ್ಮ ಅನುಭವವನ್ನು ಮಿಡ್ಲ್ ಈಸ್ಟ್ ಐ ಜತೆ ಹಂಚಿಕೊಂಡಿದ್ದಾರೆ. ತಮ್ಮನ್ನು ಸ್ಥಳದಲ್ಲಿನ ಬಂಧನ ಕೇಂದ್ರಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದರು ಎಂದು ತಿಳಿಸಿದ್ದಾರೆ.
ಸೈನಿಕರ ಗಮನ ತಮ್ಮ ಶಿರೋವಸ್ತ್ರದ ಮೇಲಷ್ಟೇ ಇತ್ತು. ಅದನ್ನು ಪರಿಶೀಲಿಸುವಾಗ ‘ಪ್ಯಾಲೆಸ್ತೀನಿಯಾ ಕೆಫಿಯೆಹ್’ ಎಂದು ಪದೇ ಪದೇ ಹೇಳುತ್ತಿದ್ದರು ಎಂದಿದ್ದಾರೆ. ಅವರನ್ನು ಬಳಿಕ ಬಿಡುಗಡೆ ಮಾಡಲಾಯಿತಾದರೂ, ಸ್ಕಾರ್ಫ್ ಧರಿಸದಂತೆ ಎಚ್ಚರಿಕೆ ನೀಡಲಾಯಿತು.
ನನ್ನನ್ನು ನಂತರ ಅಲ್ಲಿಂದ ಹೋಗಲು ಬಿಟ್ಟಾಗ, ಸಿಬ್ಬಂದಿಯೊಬ್ಬರು ನನ್ನ ಬಳಿ ಬಂದು, ನನ್ನ ಸ್ಕಾರ್ಫ್ ಅನ್ನು ಎತ್ತಿಕೊಂಡರು. ‘ಇದು ಒಳ್ಳೆಯದಲ್ಲ. ಇಸ್ರೇಲ್- ಪ್ಯಾಲೆಸ್ತೀನ್ ಒಳ್ಳೆಯದಲ್ಲ. ಹೀಗಾಗಿ ಇದನ್ನು ಧರಿಸಬೇಡಿ. ಇದಕ್ಕೆ ಇಲ್ಲಿ ಅವಕಾಶ ಇಲ್ಲ ಎಂದು ಹೇಳಿದರು” ಎಂಬುದಾಗಿ ಇಸ್ಲಾ ಹೇಳಿದ್ದಾರೆ.
ಬಿಡುಗಡೆ ಅರ್ಜಿಗೆ ಅವರು ಸಹಿ ಹಾಕಿದ್ದು, ಕೆಫಿಯೆಹ್ ಅನ್ನು ಅಲ್ಲಿ ಇರಿಸಿ ತೆರಳುವ ಮುನ್ನ ಬೆರಳಚ್ಚು ಪಡೆದುಕೊಳ್ಳಲಾಯಿತು. ಆಧ್ಯಾತ್ಮಿಕ ಪಯಣದ ವೇಳೆ ನಡೆದ ಈ ಘಟನೆ, ತಮಗೆ ಆರಂಭದಲ್ಲಿ ಭಯ ಉಂಟುಮಾಡಿತ್ತು. ಬಳಿಕ ಮನಸ್ಸಿಗೆ ತೀವ್ರ ನೋವುಂಟು ಮಾಡಿತು. ಪ್ಯಾಲೆಸ್ತೀನಿಯನ್ನರು ಪ್ರತಿದಿನ ಅನುಭವಿಸುತ್ತಿರುವುದಕ್ಕೆ ಅನುಕಂಪ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಆದರೆ, ಇದರ ಬೆನ್ನಲ್ಲೇ ಅವರು ಆನ್‌ಲೈನ್‌ನಲ್ಲಿ ದ್ವೇಷ ಸಂದೇಶಗಳು ಬರುತ್ತಿರುವುದಾಗಿ ತಿಳಿಸಿದ್ದಾರೆ. ಆರಾಧನಾ ಸ್ಥಳಗಳಲ್ಲಿ ಬಾವುಟ ಅಥವಾ ಸಂಕೇತಗಳ ಮೇಲಿನ ನಿಷೇಧವನ್ನು ಸೌದಿ ಅರೇಬಿಯಾದ ಅನೇಕರು ಸಮರ್ಥಿಸಿಕೊಂಡಿದ್ದಾರೆ.
ಪ್ಯಾಲೆಸ್ತೀನಿಯನ್ನರ ಪರ ಪ್ರಾರ್ಥನೆ ಸಲ್ಲಿಸಿದ್ದಕ್ಕಾಗಿ ಸೌದಿ ಅರೇಬಿಯಾದಲ್ಲಿ ಅಲ್ಜೀರಿಯಾದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆತನನ್ನು ಆರು ಗಂಟೆ ಬಂಧಿಸಿ, ವಿಚಾರಣೆ ನಡೆಸಲಾಗಿತ್ತು. ಗಾಜಾ ಪರ ಪ್ರಾರ್ಥಿಸುವ ವಿಡಿಯೋವನ್ನು ಡಿಲೀಟ್ ಮಾಡಲು ಆತನ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ವರದಿ ಹೇಳಿದೆ.
ಗಾಜಾ ಯುದ್ಧದ ಕುರಿತು ಹೇಳಿಕೆ ಅಥವಾ ಹಾವಭಾವ ಪ್ರದರ್ಶಿಸದಂತೆ ಗ್ರ್ಯಾಂಡ್ ಮಸೀದಿಯ ಧಾರ್ಮಿಕ ವ್ಯವಹಾರಗಳ ಮುಖ್ಯಸ್ಥ ಅಬ್ದುಲ್ ರಹಮಾನ್ ಅಲ್ ಸುದೈಸ್ ಸೂಚನೆ ನೀಡಿದ್ದಾರೆ. ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧವನ್ನು ಸಹಜಗೊಳಿಸುವ ಪ್ರಯತ್ನದ ನಡುವೆ, ಗಾಜಾ ಪರ ಅನುಕಂಪ ಪ್ರದರ್ಶಿಸುವವರಿಗೆ ಸೌದಿ ನಿರ್ಬಂಧ ವಿಧಿಸುತ್ತಿದೆ.