ಅಹಮದಾಬಾದ್ : ಭಾನುವಾರ ಭಾರತ ಆಸ್ಟೇಲಿಯಾ ನಡುವೆ ನಡೆದ ವಿಶ್ವಕಪ್ ಫೈನಲ್ ಪಂದ್ಯದ ಕುರಿತು ಬಹಳಷ್ಟು ನಿರೀಕ್ಷೆಗಳಿದ್ದವು. ಭಾರತ ಗೆಲುವು ದಾಖಲಿಸಬಹುದು ಎಂದು ಎಲ್ಲರೂ ಕಾಯುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಪಂದ್ಯವನ್ನು ವೀಕ್ಷಿಸಲು ಮೊಟೇರಾಗೆ ಬಂದಿದ್ದರು. ಆದರೆ ಭಾರತ ತಂಡವು ಫೈನಲ್‌ನಲ್ಲಿ ಮುಗ್ಗರಿಸಿ ನಿರಾಸೆ ಉಂಟು ಮಾಡಿತು.
ಭಾರತದ ಆಟಗಾರರು ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಪಂದ್ಯ ಸೋಲುತ್ತಿದ್ದಂತೆಯೇ ಕೆಲ ಆಟಗಾರರು ಮೈದಾನದಲ್ಲಿಯೇ ಕಣ್ಣೀರಿಟ್ಟ ದೃಶ್ಯ ಕಂಡು ಬಂತು.
ಪಂದ್ಯ ಮುಕ್ತಾಯದ ಬಳಿಕ ಭಾರತ ತಂಡದ ಆಟಗಾರರು ಸೋಲಿನ ನೋವಿನಿಂದ ಹೊರಗೆ ಬಂದಿರಲಿಲ್ಲ. ಈ ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಸ್ವತಃ ಡ್ರೆಸ್ಸಿಂಗ್ ರೂಂಗೆ ತೆರಳಿ ಆಟಗಾರರನ್ನು ಸಂತೈಸುವ ಕೆಲಸ ಮಾಡಿದರು.
ಭಾರತ ತಂಡದ ಹಲವು ಕ್ರಿಕೆಟಿಗರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಧಾನಿ ತಮ್ಮನ್ನು ಭೇಟಿಮಾಡಿ ನೋವಿನಲ್ಲಿರುವ ತಮ್ಮನ್ನು ಸಂತೈಸುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಮೊಹಮ್ಮದ್ ಶಮಿ ಮೋದಿ ತಮ್ಮನ್ನು ಅಪ್ಪಿಕೊಂಡಿರುವ ಫೋಟೋ ಹಂಚಿಕೊಂಡಿದ್ದು, ದುರಾದೃಷ್ಟವಶಾತ್ ನಿನ್ನೆ ನಮ್ಮ ದಿನವಾಗಿರಲಿಲ್ಲ. ಡ್ರೆಸ್ಸಿಂಗ್ ರೂಂಗೆ ಬಂದು ನಮ್ಮ ಸ್ಪಿರಿಟ್ ಹೆಚ್ಚಿಸಿದ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು. ನಾವು ಬೌನ್ಸ್ ಬ್ಯಾಕ್ ಮಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಜಡೇಜಾ ಟ್ವೀಟ್ ಮಾಡಿ, ಪ್ರಧಾನಿ ಮೋದಿಯವರು ಡ್ರೆಸ್ಸಿಂಗ್ ರೂಂಗೆ ಬಂದು ನಮ್ಮನ್ನು ಸಂತೈಸಿದರು ಹಾಗೂ ನಮ್ಮಲ್ಲಿ ಸ್ಪೂರ್ತಿಯನ್ನು ತುಂಬಿದರು ಎಂದು ಬರೆದುಕೊಂಡಿದ್ದಾರೆ.
ಸದ್ಯ ಈ ಫೋಟೋಗಳು ವೈರಲ್ ಆಗುತ್ತಿದ್ದು, ಭಾರತ ತಂಡದೊಂದಿಗೆ ನಾವಿದ್ದೇವೆ ಎಂದು ಹಲವರು ಹೇಳಿದ್ದು, ಮೋದಿ ನಡೆಯನ್ನು ಮೆಚ್ಚಿಕೊಂಡಿದ್ದಾರೆ.