ಕುಂದಾಪುರ : ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯ ಸಂದರ್ಭದಲ್ಲಿ ಮಗು ಮೃತಪಟ್ಟಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ನವೆಂಬರ್ 17 ರಂದು ರಾತ್ರಿ ಗಂಗೊಳ್ಳಿಯ ಗುಡ್ಡದಕೇರಿಯ ದಾವನಮನೆ ಶ್ರೀನಿವಾಸ ಖಾರ್ವಿ ಎಂಬವರ ಪತ್ನಿ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಬೆಳಿಗ್ಗೆ ಹೆರಿಗೆ ಮಾಡಿಸಿದ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.
ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಮನೆಯವರು ಹಾಗೂ ಊರಿನವರು ಆರೋಪಿಸಿದ್ದಾರೆ.
ಮೂರು ದಿನದ ಹಿಂದೆ ತೀವ್ರ ರಕ್ತಸ್ರಾವ ಹಾಗೂ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರೂ ಸರಿಯಾದ ಚಿಕಿತ್ಸೆ ಹಾಗೂ ಮುಂಜಾಗ್ರತಾ ಕ್ರಮ ವಹಿಸದೆ, ಸ್ವಾಭಾವಿಕ ಹೆರಿಗೆಯ ನೆಪವೊಡ್ಡಿ ಮೂರು ದಿನ ಕಾಯಿಸಿದ್ದಾರೆ. ಈ ಬಗ್ಗೆ ದೂರು ಕೊಟ್ಟರೆ ನಿಮಗೆ ತೊಂದರೆಯಾಗುತ್ತದೆ ಎಂದು ಬೆದರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವೈದ್ಯಾಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಯುತ್ತಿದೆ.