ಸನಾ : ಹಡಗಿನ ಮೇಲೆ ಇಳಿದ ಹೆಲಿಕಾಪ್ಟರ್ ರೈಫಲ್ ಹಿಡಿದು ಘೋಷಣೆ ಕೂಗುತ್ತಾ ಇಳಿದ ಬಂಡುಕೋರರು ಹಡಗನ್ನು ಸಿನಿಮಾಶೈಲಿಯಲ್ಲಿ ಅಪಹರಿಸಿರುವ ಘಟನೆ ನಿಬ್ಬೆರಗಾಗಿಸಿದೆ.
ಭಾರತಕ್ಕೆ ಬರುತ್ತಿದ್ದ ಸರಕು ಹಡಗು ಗ್ಯಾಲಕ್ಸಿ ಲೀಡರ್ ಅಪಹರಣದ ಕೊನೆಯ ಕ್ಷಣಗಳ ವಿಡಿಯೋವನ್ನು ಯೆಮೆನ್ ಮೂಲದ ಹೌತಿ ಬಂಡುಕೋರರು ಬಿಡುಗಡೆ ಮಾಡಿದ್ದಾರೆ.
ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ ಹಡಗನ್ನು ಭಾನುವಾರ ಅಪಹರಣ ಮಾಡಲಾಗಿತ್ತು. ಈಗ ಹೌತಿ ಬಂಡುಕೋರರು ಹಡಗನ್ನು ಹೈಜಾಕ್ ಮಾಡುವ 2 ನಿಮಿಷಗಳ ಭಯಾನಕ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಹಮಾಸ್ ಪ್ರತಿಕಾರ :
ಹೆಲಿಕಾಪ್ಟರ್‌ನಲ್ಲಿ ಬಂದ ಬಂಡುಕೋರರು ಹಡಗಿನ ಮೇಲೆ ದಾಳಿ ಮಾಡಿದ್ದಾರೆ. ಹಡಗಿನ ಡೆಕ್‌ನಲ್ಲಿ ಲ್ಯಾಂಡ್ ಆದ ಹೆಲಿಕಾಪ್ಟರ್‌ನಿಂದ 10ಕ್ಕೂ ಹೆಚ್ಚು ಬಂಡುಕೋರರು ಘೋಷಣೆಗಳನ್ನು ಕೂಗುತ್ತಾ ಗುಂಡು ಹಾರಿಸುತ್ತಾ ನಿಯಂತ್ರಣ ಕೇಂದ್ರಕ್ಕೆ ಬಂದಿದ್ದಾರೆ. ಬಂಡುಕೋರರನ್ನು ನೋಡಿದ ಸಿಬ್ಬಂದಿ ಗಾಬರಿಗೊಂಡು, ಕೈಯನ್ನು ಮೇಲಕ್ಕೆ ಎತ್ತಿ ಶರಣಾಗಿದ್ದಾರೆ.
ಹಮಾಸ್ ವಿರುದ್ಧದ ಯುದ್ಧದ ಪ್ರತೀಕಾರವಾಗಿ ಇಸ್ರೇಲಿ ಹಡಗುಗಳನ್ನು ಗುರಿಯಾಗಿಸಿಕೊಂಡು ನಾವು ದಾಳಿ ಮಾಡುತ್ತೇವೆ ಎಂದು ಹೌತಿ ಬಂಡುಕೋರರು ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ನಿರಾಕರಣೆ :
ಹಡಗು ಇಸ್ರೇಲಿಗೆ ಸೇರಿದ್ದು ಎಂದು ಹೌತಿ ಹೇಳಿದೆ. ಆದರೆ ಈ ಹೇಳಿಕೆಯನ್ನು ಇಸ್ರೇಲ್ ನಿರಾಕರಿಸಿದೆ. ಇದರಲ್ಲಿ ಇಸ್ರೇಲ್ ಪ್ರಜೆಗಳು ಯಾರು ಇರಲಿಲ್ಲ. ಅಪಹರಣಕ್ಕೊಳಗಾದ ಹಡಗು ತನ್ನದ್ದಲ್ಲ ಎಂದು ಇಸ್ರೇಲ್ ತಿಳಿಸಿದೆ.
ಅಪಹರಣಕ್ಕೊಳಗಾದ ಹಡಗಿನ ಮೇಲೆ ಬಹಾಮಾಸ್ ಧ್ವಜವಿತ್ತು. ಹಡಗಿನಲ್ಲಿ ವಿವಿಧ ರಾಷ್ಟ್ರಗಳಿಗೆ ಸೇರಿದ ಸುಮಾರು 25 ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ.
ಇದು ಬ್ರಿಟಿಷ್ ಕಂಪನಿಯ ಒಡೆತನದಲ್ಲಿದ್ದು, ಇಸ್ರೇಲಿ ಉದ್ಯಮಿ ಅಬ್ರಹಾಂ “ರಾಮಿ” ಉಂಗಾರ್ ಅವರೂ ಕೂಡ ಈ ಹಡಗಿನ ಸಹ ಮಾಲೀಕರು ಎಂದು ಹೇಳಲಾಗಿದೆ. ಅಪಹರಣದ ಸಮಯದಲ್ಲಿ ಹಡಗನ್ನು ಜಪಾನಿನ ನಿಪ್ಪನ್ ಯೂಸೆನ್ ಕಂಪನಿಗೆ ಗುತ್ತಿಗೆಗೆ ನೀಡಲಾಗಿತ್ತು ಎಂದು ಹೇಳಲಾಗಿದೆ.
ಎಲ್ಲಿದೆ ಹಡಗು ?
ಹಡಗಿನ ಜೊತೆ ಸಂವಹನ ಸಂಪೂರ್ಣ ಕಡಿತಗೊಂಡಿದೆ. ಸದ್ಯ ಇದು ಯೆಮೆನ್‌ನಲ್ಲಿರುವ ಹುದೈದಾ ಬಂದರಿನಲ್ಲಿದೆ ಎಂದು ಗ್ಯಾಲಕ್ಸಿ ಲೀಡರ್ ನಿರ್ವಹಣೆ ಮಾಡುತ್ತಿರುವ ಕಂಪನಿಯ ವಕ್ತಾರರು ತಿಳಿಸಿದ್ದಾರೆ.