ಉಡುಪಿ : ಉಡುಪಿಯ ಡಾ.ಜಿ.ಶಂಕರ್ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಉಡುಪಿ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದ ಸಹಯೋಗದೊಂದಿಗೆ ರಾಷ್ಟ್ರೀಯ ವಿಚಾರ ಸಂಕಿರಣ ‘ ಮಹಿಳೆ_ ಸಮಕಾಲೀನ ತಲ್ಲಣಗಳು’ ಇತ್ತೀಚೆಗೆ ನಡೆಯಿತು.
ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಪ್ರೊ.ಪುರುಷೋತ್ತಮ ಬಿಳೀಮಲೆ, ಮಹಿಳೆಯರ ಬಗೆಗೆ ಸಿಗುವ ಯಾವ ಅಂಕಿ ಅಂಶಗಳೂ ನಿಖರವಾಗಿಲ್ಲ ಎನ್ನುವ ಅಂಕಿ ಅಂಶಗಳನ್ನು ನೀಡುವುದರ ಜೊತೆಗೆ ೧೯೯೨ರ ನಂತರ ಕಾಣಿಸಿಕೊಂಡ ಜಾಗತೀಕರಣದ ಪರಿಣಾಮವನ್ನು ಫೋಕಸ್ ಮಾಡಿದರು. ರಾಜಕೀಯ ಪಕ್ಷ ಯಾವುದೇ ಅಧಿಕಾರದಲ್ಲಿದ್ದರೂ ಅದು ಇಂಥ ಅಂಕಿ ಅಂಶಗಳನ್ನು ನಿಖರವಾಗಿ ಒದಗಿಸದಿರಲು ಪ್ರಭಾವ ಬೀರದಂತೆ ಜಾಗರೂಕವಾಗಿ ಸಂಗ್ರಹಿಸಬೇಕು. ಜಗತ್ತಿನ ಯಾವುದೇ ಮಹಿಳೆಯ ಸಮಸ್ಯೆಗೆ ಪರಿಹಾರ ಒದಗಿಸಲು ಜಾತಿ ಮಾನದಂಡವಾಗಬಾರದು ಎಂದರು.
ಸೆನ್ಸಿಬಲ್ ವ್ಯಕ್ತಿಗಳಿಗೆ ಗೊತ್ತಾಗುವ ಸಂಗತಿಗಳು ಒರಟು ರಾಜಕಾರಣಿಗಳಿಗೆ ತಿಳಿಯುವುದಿಲ್ಲ. ಜನಗಣತಿಯನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಮಹಿಳೆಯ ಮೇಲೆ ನಡೆಯುವ ಹಿಂಸೆಯ ೧೪೫ ದೇಶಗಳಲ್ಲಿ ನಮ್ಮದು ೧೩೫ ನೇ ದೇಶ. ‘ ಹಿಂಸೆ’ ಎಂಬುದು ಮೂಲ ಪದ:’ ಅಹಿಂಸೆ’ ಸಾಧಿತ ಪದ. ೬೫% ಮಹಿಳೆಯರು ಸಂಸಾರ ಉಳಿಯುವುದಕ್ಕೆ ನಾವು ಹಿಂಸೆಯನ್ನು ಸಹಿಸಿಕೊಳ್ಳಬೇಕು ಎನ್ನುತ್ತಾರೆ. ಅವರಲ್ಲಿ ದೂರು ಕೊಡುವ ಶಕ್ತಿಯೇ ಇಲ್ಲ. ಪುರುಷರ ಸಂಖ್ಯೆ ೭೪% ಇದ್ದರೆ ಮಹಿಳೆಯರ ಸಂಖ್ಯೆ ೭೦%. ೨೦೦೦೨೦೧೯ ರ ಅವಧಿಯಲ್ಲಿ ತೊಂಬತ್ತು ಸಾವಿರ ಭ್ರೂಣ ಹತ್ಯೆಗಳಾಗಿವೆ. ೫೮% ಮಹಿಳೆಯರು ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಯಾಕೆ ಮನುಷ್ಯ ತನ್ನ ಮೃಗೀಯ ಭಾವನೆಯನ್ನು ಕಳೆದುಕೊಳ್ಳುತ್ತಿಲ್ಲ? ಎಂಬ ಮುಖ್ಯ ಪ್ರಶ್ನೆಯೆತ್ತಿದರು. ಬಾಲ್ಯದಲ್ಲಿ ಜ್ಯೋತಿಷಿಗಳು ತನಗೆ ‘ ವಿದ್ಯಾ ಯೋಗವಿಲ್ಲ’ ಎಂದು ಭವಿಷ್ಯ ನುಡಿದಾಗ್ಯೂ ತನ್ನ ತಾಯಿ ಅಧೀರಳಾಗದೆ ಅವಳ ಕಿವಿಯೋಲೆಗಳನ್ನು ಮಾರಿ ತನ್ನ ವಿದ್ಯಾಭ್ಯಾಸದ ಖರ್ಚನ್ನು ಭರಿಸುವ ಗಟ್ಟಿ ನಿರ್ಧಾರ ಮಾಡಿದಳು. ಅಮ್ಮನ ಓಲೆಯೇ ನನ್ನ ಪಾಲಿನ ಮಹಿಳಾ ಶಕ್ತಿ ಎಂದರು.
ಲಿಂಗ ತಾರತಮ್ಯದ ಅರಿವು ಹೆಚ್ಬೇಕು. ನಾನು ಹೆಣ್ಣಾಗಿ ಹುಟ್ಟಿದ್ದೇನೆ ಎಂಬ ಕಾರಣಕ್ಕೆ ನನ್ನ ಶೋಷಣೆಯಾಗಬೇಕಿಲ್ಲ. ಒಬ್ಬಳೇ ಆದರೂ ಸರಿ ಸ್ವಯಂ ಶಕ್ತಿಯಿಂದ ಗೆಲ್ಲುತ್ತೇನೆಂಬ ಆತ್ಮವಿಶ್ವಾಸ ಹೆಣ್ಣಿನಲ್ಲಿ ಮೂಡಬೇಕು’ ಎಂದರು.
‘ ಆಶಯ ನುಡಿ’ ನುಡಿದ ಪ್ರೊ.ಸಬೀಹಾ ಭೂಮಿಗೌಡ ಅವರು ” ಮಹಿಳೆಯ ತಲ್ಲಣವೆಂದರೆ ಅದು ಬರೀ ಮಹಿಳೆಯದ್ದೇ ಅಥವಾ ಇಡೀ ಸಮಾಜದ್ದೇ ?” ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಪುರುಷರ ಸಮಸ್ಯೆಯನ್ನು ಮಾತ್ರ ಸಾಮಾಜಿಕ ಸಮಸ್ಯೆ ಎಂದು ಪರಿಗಣಿಸಲಾಗುತ್ತಿದೆ. ತರ್ಕ ಮತ್ತು ರಾಜಕಾರಣಗಳನ್ನು ಒಡೆದರೆ ಮಾತ್ರ ಬದುಕಿನ ತಲ್ಲಣಗಳು ಸಿಗುತ್ತವೆ. ” ಒಬ್ಬಳೇ ಆದರೂ ಸರಿ ಹಿಂಸೆಯ ವಿರುದ್ಧ ನನ್ನ ಧ್ವನಿ ತೆಗೆಯುತ್ತೇನೆ” ಎಂಬ ಛಲ ಹೆಣ್ಣಲ್ಲಿ ಮೂಡಬೇಕು. ಹೆಣ್ಣನ್ನು ಅವಮಾನಿಸಲು ಹೆಣ್ಣಿನ ದೇಹ ಒಂದು ರಣರಂಗವಾಗಿಬಿಟ್ಟಿದೆ. ಈ ರಾಜಕಾರಣವನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ. ದೇಹದ ಹಕ್ಕು, ಶಿಕ್ಷಣ, ಉಡುಪು, ಸಂಘಟನಾತ್ಮಕ ಹಕ್ಕು ಮುಂತಾದ ಮಾನವ ಹಕ್ಕುಗಳ ರಕ್ಷಣೆಯಾಗಬೇಕು. ಮನದ ಬೆಳಕಿನ ಆಸರೆಯಿಂದ ಹೊರಗಿನ ಹಿಂಸಾ ಪರಿಸರವನ್ನು ಮೀರಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಆ ಕೋಲಿನ ಸಾಂಪ್ರದಾಯಿಕ ಕಥೆ ಹೀಗಿದೆ: ‘ ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣಿಗೆ ತಾಯಿಯ ಮನೆಯಿಂದ ಒಂದು ಕೋಲನ್ನು ಕೊಡುವ ಪದ್ಧತಿಯಿದೆ. ಗಂಡನ ಮನೆಯಲ್ಲಿ ಅವಳಿಗೇನಾದರೂ ತೊಂದರೆಯಾಗಿ ನ್ಯಾಯ ಸಿಗದಿದ್ದಾಗ ಅವಳು ಆ ಕೋಲನ್ನು ಹಿಡಿದುಕೊಂಡು ಪ್ರತಿಭಟನೆಯ ರೂಪದಲ್ಲಿ ಹೊರಗೆ ಕೂರುತ್ತಾಳೆ. ಆಗ ಅಕ್ಕಪಕ್ಕದ ಹೆಣ್ಣು ಮಕ್ಕಳೂ ಅವಳಿಗೆ ಬೆಂಬಲ ನೀಡುವಂತೆ ಅವರವರ ಕೋಲುಗಳನ್ನು ತೆಗೆದುಕೊಂಡು ಬಂದು ಅವಳ ಜೊತೆ ಕೂತು ಸತ್ಯಾಗ್ರಹ ಹೂಡುತ್ತಾರೆ. ನ್ಯಾಯ ಸಿಕ್ಕ ಮೇಲೆಯೇ ಅವರುಗಳು ಆ ಸ್ಥಳದಿಂದ ಏಳುವುದು. ಈ ಕೋಲು ಶೋಷಕರ ಕಣ್ಣು ತೆರೆಸುವ, ನಮ್ಮ ಅನಿವಾರ್ಯತೆಯನ್ನು ಅರ್ಥ ಮಾಡಿಸುವ ಸಾಧನ. ಇಂಥ ಕೋಲು ಮನೆ ಮನೆಗೂ ಬೇಕು ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅತಿಥೇಯ ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ್ ಶೆಟ್ಟಿ ಮಾತನಾಡಿ, ಸಮಕಾಲೀನ ಮಹಿಳಾ ತಲ್ಲಣಕ್ಕೆ ಸ್ಪಂದಿಸುತ್ತ ‘ ಹೆಣ್ಣೊಂದು ಕಲಿತರೆ ಶಾಲೆಯೊಂದು ಕಲಿತಂತೆ’ ಎಂಬ ಚಿಂತಕ ವಿಕ್ಟರ್ ಹ್ಯೂಗೋ ನ ಚಿಂತನೆಯನ್ನು ಉಲ್ಲೇಖಿಸಿದರು. ಶಿವರಾಮ ಕಾರಂತರ ಕಾದಂಬರಿಯ ಮೂಕಾಂಬಿಕೆಯನ್ನೂ, ‘ ತೂರಬೇಡಿ ಹೆಣ್ತನವ’ ಎಂಬ ವಿಜಯಾ ದಬ್ಬೆಯವರ ಕವಿತೆಯನ್ನೂ ನೆನೆದರು.
ವಿಚಾರ ಸಂಕಿರಣದ ಮೊದಲ ವಿಚಾರ ಗೋಷ್ಠಿಯ ಉಪನ್ಯಾಸ ನೀಡಿದ ಪ್ರೊ.ಸಬಿತಾ ಬನ್ನಾಡಿಯವರು ‘ ಮಹಿಳೆ _ ಸಮಕಾಲೀನ ಸಾಹಿತ್ಯದ ತಲ್ಲಣಗಳು’ ಎಂಬ ವಿಷಯ ಕುರಿತು ಮಾತಾಡಿದರು. ಹೆಂಡತಿಗೆ ಗಂಡ ವಿಚ್ಛೇದನ ಕೊಟ್ಟ ಎಂಬ ಸುದ್ದಿ ವೃತ್ತ ಪತ್ರಿಕೆಗಳಲ್ಲಿ ಪ್ರಧಾನ ಅಂಶ ಆಗುವ ಹಾಗೆ ಹೆಂಡತಿಯಿಂದ ವಿಚ್ಛೇದನ ಪಡೆದ ಎಂದು ಯಾಕೆ ಬರೆಯಲ್ಪಡುವುದಿಲ್ಲ? ಎಂಬ ಪ್ರಶ್ನೆ ಎತ್ತಿ ಮಹಿಳೆಯ ತಲ್ಲಣವನ್ನು ಹೂವು ಬೆಳೆಯುವವರು ಮತ್ತು ಕೋವಿಯ ಬಾಯಿಯ ನಡುವಿನ ತಿಕ್ಕಾಟ ಎಂದು ವ್ಯಾಖ್ಯಾನಿಸಿದರು. ಎಲ್ಲವನ್ನೂ ವ್ಯಾಪಾರಕ್ಕಿಟ್ಟು ಬಂದೂಕಿನ ಒಡೆಯರಾಗುವ ಸಂದರ್ಭದ ಒಳ ವಿಮರ್ಶೆ, ಸ್ವ ವಿಮರ್ಶೆ ಆಗಬೇಕು. ಇದು ಸ್ತ್ರೀ ಚೈತನ್ಯವನ್ನು ಅದುಮಿಡದೆ ಒಡಕುಗಳನ್ನು ಬೆಸೆಯುವ ಉದ್ದೇಶ. ನಿಮ್ಮ ಸಮಾಜದಲ್ಲಿ ನಮಗೆ ಜಾಗ ಕೊಡಿ” ಎಂದು ನಾವು ಪುರುಷ ಪ್ರಧಾನ ಸಮಾಜದಲ್ಲಿ ಕೇಳುತ್ತಿಲ್ಲ. ಅಲ್ಲಮ ಹೇಳುವಂತೆ ಅನುಭವವೇ ಪ್ರಮಾಣವಾಗಬೇಕು. ಹೇಗೆ ಎಂಬುದಲ್ಲ ನಾವು ಏನು ಹೇಳುತ್ತಿದ್ದೇವೆಯೋ ಅದು ಮುಖ್ಯ. ಹೆಣ್ಣು ಒಂದು ಸಣ್ಣ ಕನಸನ್ನೂ ಕಾಣುವುದಕ್ಕಾಗುವುದಿಲ್ಲವೇ ಈ ಸಮಾಜದಲ್ಲಿ? ಎಂಬ ಇಂಗಿತದೊಡನೆ ಹಿರಿಯ ಲೇಖಕಿ ಡಾ.ವಿಜಯಮ್ಮನ ಆತ್ಮಕಥೆಯಲ್ಲಿ ಬರುವ ಅವರ ಗಂಡನ ಕ್ರೌರ್ಯವನ್ನು ಉಲ್ಲೇಖಿಸಿದರು. ಅಂಥ ಕ್ರೌರ್ಯಕ್ಕೆ ಕಾರಣವಾಗುವ ಸಮಾಜ ಕ್ರೂರ ಸಮಾಜ. ಇಂಥ ಕ್ರೌರ್ಯಕ್ಕೆ ಮಹಿಳೆಯೂ ನೀರೆರೆಯುವಳಾದರೆ ಅದು ತಲ್ಲಣ. ಮಹಿಳಾ ಸಾಹಿತ್ಯ ನಿಂತ ನೀರಲ್ಲ. ಕನ್ನಡ ವಿಮರ್ಶಾ ಲೋಕ ಇದನ್ನು ಸರಿಯಾಗಿ ಗುರುತಿಸಬೇಕಿದೆ. ” ಗಂಟೆ ಬಾರಿಸುತಿದೆ ಮನು ಕುಲದ್ದು’ ಎಂದು ಹೇಳುವುದು ಸ್ತ್ರೀ ವಾದ. ನೀಡುವುದು, ಕಾಳಜಿ ವಹಿಸುವುದು, ಒಳಗೊಳ್ಳುವುದು’ ಇವೆಲ್ಲಾ ಸ್ತ್ರೀವಾದದ ಭಾಗ. ಇದನ್ನು ಅಲ್ಲಗೆಳೆಯುವ ‘ ಗಂಡು ಮೊಂಡಿನ ನೋಟ’ ಬದಲಾಗಿ ತಿರುಗಿ ನೋಡಬೇಕಿದೆ ಎಂಬ ಒಳನೋಟವನ್ನು ಬಿಚ್ಚಿಟ್ಟರು.
ಪೂರಕ ನುಡಿಯನ್ನಾಡಿದ ಡಾ. ಪ್ರಸಾದ್ ರಾವ್ ಅವರು ಆರ್ಡರ್ ಮಾಡುವ ಆಧುನಿಕ ಸಂಸ್ಕೃತಿ ವ್ಯವಸ್ಥೆಯ ಸುಭದ್ರ ಬದುಕಿನ ಭ್ರಮೆಯ ಭಾಗ ಎಂದರು. ಹಿಂದೆ ದೇಹ ಮಾತ್ರ ಮಾರಾಟವಾಗುತ್ತಿತ್ತು. ಈಗ ಮನಸ್ಸೂ ಮಾರಾಟವಾಗುತ್ತಿದೆ ಎಂಬ ವಿಮರ್ಶಕ ಡಿ.ಆರ್.ನಾಗರಾಜ್ ಅವರ ಮಾತನ್ನು ಉಲ್ಲೇಖಿಸಿದರು. ಮಹಿಳೆಯರ ಅಂತಃಶಕ್ತಿ ಪೂರ್ಣಪ್ರಮಾಣದಲ್ಲಿ ಹೊರಬರಬೇಕೆಂದರು.
ಪೂರಕ ನುಡಿಯನ್ನಾಡಿದ ಖ್ಯಾತ ಯುವ ಲೇಖಕಿ ಫಾತಿಮಾ ರಲಿಯಾ ಅವರು ಹೆಣ್ಣು ಮೈ ನೆರೆಯುವಾಗಿನ ಭಯದ ತಲ್ಲಣವನ್ನು ಉಲ್ಲೇಖಿಸಿದರು. ಮಗು ಕೆಳಗೆ ಬಿದ್ದರೆ ತಾಯಿಯನ್ನು ಮಾತ್ರ, ನೀನೇನ್ಮಾಡ್ತಿದ್ದೆ ಮಗು ಕೆಳಗೆ ಬೀಳೋವಾಗ ಎಂದು ತಾಯಿಯನ್ನು ಮಾತ್ರ ಪ್ರಶ್ನೆ ಮಾಡುವ ಪುರುಷ ಧ್ವನಿಯನ್ನು ವಿಡಂಬಿಸಿದರು. ಪುರುಷ ಸಮಾಜದ ನಿರ್ಧಾರ ಮಹಿಳೆಯ ಅಸ್ತಿತ್ವಕ್ಕೆ ಕುಂದು ತರುತ್ತಿದೆ. ಪುರುಷನ ಅಥವಾ ಮಹಿಳೆಯ ಎರಡು ಯಾಜಮಾನ್ಯವನ್ನೂ ನಿರಾಕರಿಸಬೇಕು ಎಂದರು.
ಡಾ. ನಾಗವೇಣಿ ಮಂಚಿ ಮಾತನಾಡಿ, ಪ್ರಸ್ತುತದಲ್ಲಿ ದೈಹಿಕ ಹಿಂಸೆಗಿಂತಲೂ ಹೆಚ್ಚಾಗಿ ಮಾನಸಿಕ ಹಿಂಸೆ, ಚಾರಿತ್ರ್ಯ ವಧೆಗಳನ್ನು ಎದುರಿಸಬೇಕಾದ ತಲ್ಲಣವಿದೆ. ಇದು ಬಲು ಘೋರ. ಇಂಥ ವಾಸ್ತವ ಕೇಂದ್ರಿತ ಸಾಹಿತ್ಯದ ಸೃಷ್ಟಿಯಾಗಬೇಕಿದೆ ಎಂದರು.
ಎರಡನೇ ವಿಚಾರ ಗೋಷ್ಠಿಯ ಉಪನ್ಯಾಸ ನೀಡಿದ ಪ್ರೊ.ಆರ್. ಸುನಂದಮ್ಮನವರು ‘ ಕೊರೋನಾ ಕಾಲದ ಮಹಿಳೆಯ ತಲ್ಲಣ’ ವನ್ನು ಕುರಿತು ಮಾತಾಡಿದರು. ಕೊರೋನಾ ಕಾಲದಲ್ಲಿ ಹೆಚ್ಚಿನ ಗಂಡಸರು ಕುಡಿತದ ಮೊರೆ ಹೋದರು. ಹೆಣ್ಣಿನ ಒಡವೆಗೂ ಬೇಡಿಕೆಯಿಟ್ಟರು. ದೇಹ ರಚನಾ ವಿಧಾನ, ಮನೋಧರ್ಮ ಇವುಗಳಲ್ಲಿ ಹೆಣ್ಣು ಗಂಡಿಗಿಂತ ವಿಭಿನ್ನಳು. ಕೊರೋನಾ ಸಮಯದಲ್ಲಿ ೪೫% ಹೆಣ್ಣುಮಕ್ಕಳು ಖಿನ್ನತೆಗೊಳಗಾದರು. ಲಿಂಗ ತಾರತಮ್ಯದ ಸೂಚ್ಯಾಂಕದಲ್ಲಿ ನಮ್ಮ ದೇಶ ೧೪೬ ನೇ ರ್ ಯಾಂಕಿಂದ ೧೨೭ ಕ್ಕೆ ಏರಿತು. ಎಷ್ಟೋ ಹೆಣ್ಣುಮಕ್ಕಳು ಕೆಲಸ ಕಳೆದುಕೊಂಡರು. ‘ ಮರ್ದ್ ದಿಖಾನಾ ಹೈ’ ಎಂದು ಗಂಡಸುತನದ ಪೌರುಷ ತೋರುವ ಗಂಡಸರು ಹೆಣ್ಣನ್ನು ಹೊಡೆಯುವ ಹಕ್ಕಿದೆ ತಮಗೆ ಎಂದು ಭಾವಿಸಿದ ಗಂಡಸರು. ಸಿಗರೇಟು ಸೇದುವುದನ್ನು ಗಂಡಸುತನ ಎಂದುಕೊಂಡವರು. ಜಗತ್ತಿನಲ್ಲಿ ಹಿಂಸೆ ಚಾಲೂ ಇದೆ. ನಮ್ಮ ಅಳಿವು ಉಳಿವುಗಳನ್ನು ಕಾರ್ಪೊರೇಟ್ ಜಗತ್ತು ನಿರ್ಧರಿಸುತ್ತಿದೆ. ಈ ಹಿಂಸೆಯ ಉತ್ಪನ್ನ ಹೇಗಾಯಿತು ಎಂದು ತಿಳಿಯಬೇಕಿದೆ ಎನ್ನುತ್ತ ಅಕ್ಕನ ವಚನದಲ್ಲಿ ಬರುವ ‘ ತೆರಣಿ ಹುಳು’ ವಿನ ರೂಪಕವನ್ನು ಕೊಟ್ಟರು. ನಮ್ಮನ್ನು ತಿರುಗಿಸಿ ನೋಡುವ ಪ್ರಯತ್ನವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಪೂರಕ ನುಡಿಯನ್ನಾಡಿದ ಡಾ.ಅಶೋಕ್ ಕಾಮತ್ ಅವರು ಹೆಣ್ಣುಮಕ್ಕಳು ತಮ್ಮ ಆದಾಯದ ನಿಖರತೆಯನ್ನು ತಿಳಿಸುವ ಧೈರ್ಯ ಮಾಡಬೇಕು. ಕಡಿಮೆ ಸಂಬಳ ನೀಡುವಾಗ ಒಪ್ಪಿಕೊಳ್ಳದೆ ಸ್ವಾಭಿಮಾನದಿಂದ ಪ್ರತಿರೋಧ ಒಡ್ಡಬೇಕು ಎಂಬ ಕಿವಿಮಾತು ಹೇಳಿದರು.
ಪೂರಕ ನುಡಿಯನ್ನಾಡಿದ ಡಾ. ಸುಮಾ ಅವರು ಕೊರೋನ ನಂತರ ಸಮಾನ ತಲ್ಲಣ ಕಂಡಬಂದಿದೆ, ಆರೋಗ್ಯದ ಸಮಸ್ಯೆ ಹೆಚ್ಚಿ ಒಬೆಸಿಟಿ ಮತ್ತು ಹೃದಯಾಘಾತಗಳಗೆ ಕಾರಣ ಆಗಿದೆ ಎಂದರು.
‘ ಪ್ರಬಂಧ ಮಂಡನೆ’ ಗೋಷ್ಠಿಯಲ್ಲಿ ‘ ಸುಜ್ಞಾನ ಶಾಖೆಯಲ್ಲಿ ಹೆಣ್ಣು’ ಎನ್ನುವ ಪ್ರಬಂಧ ಲೇಖಕರಾದ ಡಾ. ಕೇಶವ ಮೂರ್ತಿಯವರು ಮೇರಿ ಕ್ಯೂರಿಯವರನ್ನು ಸಿ.ವಿ.ರಾಮನ್ ಅವರು ಆಕೆ ಹೆಣ್ಣು ಎಂಬ ಕಾರಣಕ್ಕೆ ಮುಂದೆ ಹೋಗದಂತೆ ತಡೆದಿದ್ದರು ಎಂಬ ಗಂಡು ಮನಸ್ಸಿನ ಸಣ್ಣತನವನ್ನು ಫೋಕಸ್ ಮಾಡಿ ಆದರೂ ಮೇರಿ ಕ್ಯೂರಿಯವರು ತಮ್ಮ ಉತ್ಕೃಷ್ಟತೆಯನ್ನು ಮೆರೆದರು ಎಂದರು.
ಗುಲಾಬಿಯವರು ‘ ಸ್ತ್ರೀ ಎಂದರೆ ಅಷ್ಟೇ ಸಾಕೇ?’ ಎಂಬ ಪ್ರಶ್ನೆಯನ್ನಿಟ್ಟು ಹೆಣ್ಣುಮಕ್ಕಳಿಗೆ ಆಯ್ಕೆಗಳೇ ಕಷ್ಟವಾಗಿವೆ ಎಂದರು.
ಪ್ರಬಂಧ ಮಂಡನೆ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ. ಕೃಷ್ಣಮೂರ್ತಿಯವರು ಉದ್ಯೋಗಸ್ಥ ಮಹಿಳೆಗೆ ಗರ್ಭಿಣಿಯಾದರೆ ರಜೆ ಕೊಡುವ ಸೌಲಭ್ಯ ಕಾನೂನಲ್ಲಿದೆ ಆದರೆ ಕಾಲೇಜು ಓದುವ ವಿದ್ಯಾರ್ಥಿನಿ ಗರ್ಭಿಣಿಯಾಗಿ ರಜೆ ಕೇಳಿದರೆ ನಿರ್ಧಾರ ತೆಗೆದುಕೊಳ್ಳಲಾರದೆ ತಲ್ಲಣದ ಅನುಭವವಾಗಿದೆ ಎಂದರು.
ಸಮಾರೋಪ ಸಮಾರಂಭದ ಮುಖ್ಯ ಉಪನ್ಯಾಸ ನೀಡಿದ ಪ್ರೊ. ಸೋಮಣ್ಣ ಅವರು ” ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ” ಎಂಬ ರಾಮನಾಥನ ವಚನದ ಭಾವದ ಪರ ತಾನು ಎನ್ನುತ್ತ ಮುಖ್ಯವಾಗಿ ಮನುಷ್ಯನ ತಲ್ಲಣಕ್ಕೆ ಉತ್ತರ ಸಿಗಬೇಕು. ಈ ನಿಟ್ಟಿನ ಚರ್ಚೆಯಲ್ಲಿ ಇಂದಿನ ವಿಚಾರ ಸಂಕಿರಣ ಸಫಲವಾಗಿದೆ ಎಂದರು.
ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಮತ್ತು ಕಲಾ ವಿಭಾಗದ ಮುಖ್ಯಸ್ಥೆ ಹಾಗೂ ಉಡುಪಿ ಜಿಲ್ಲಾ ಲೇಖಕಿಯರ ವಾಚಕಿಯರ ಅಧ್ಯಕ್ಷೆ ಡಾ. ನಿಕೇತನಾ ಪ್ರಸ್ತಾವನೆಗೈದರು.
( ಕೃಪೆ : ಜ್ಯೋತಿ ಆರ್ ಅವರ ಫೇಸ್ ಬುಕ್ ಖಾತೆಯಿಂದ https://www.facebook.com/share/p/udokkJkQ8ouuQedU/?mibextid=qi2Omg)