ಮುಂಬೈ : ವಿಶ್ವಕಪ್ ಕ್ರಿಕೆಟ್ ಹಬ್ಬ ಮುಗಿದಿದೆ. ಈಗ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಟಿ-20 ಸರಣಿ ಆಡುತ್ತಿದೆ. ಈ ನಡುವೆ ಐಪಿಎಲ್ ಕ್ರಿಕೆಟ್ ಜಾತ್ರೆಗೆ ಮಿನಿ ಬಿಡ್ ನಡೆಯಲಿದೆ. ಇದಕ್ಕಾಗಿ ಫ್ರಾಂಚೈಸಿಗಳು ಕೆಲ ಆಟಗಾರರನ್ನು ರಿಲೀಸ್ ಮಾಡಿದೆ. ಜತೆಗೆ ಪ್ರಾಂಚೈಸಿಗಳ ನಡುವೆ ಟ್ರೇಡಿಂಗ್ ಕೂಡ ನಡೆಯುತ್ತಿದೆ. ಇದರಲ್ಲಿ ಬಹುದೊಡ್ಡ ಸುದ್ದಿ ಅಂದರೆ ಗುಜರಾತ್ ಟೈಟಾನ್ಸ್ ತಂಡವನ್ನು ನಾಯಕ ಹಾರ್ದಿಕ್ ಪಾಂಡ್ಯ ಬಿಡುತ್ತಿದ್ದಾರೆ.
ಹೌದು, ಮೂಲಗಳ ಪ್ರಕಾರ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೇವಲ 2 ಸೀಸನ್ಗಳ ನಂತರ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ. ಜಿಟಿ ಬಿಟ್ಟು ಪಾಂಡ್ಯ ಅವರು ಮತ್ತೆ ತಮ್ಮ ಹಳೆಯ ತಂಡ ಮುಂಬೈ ಇಂಡಿಯನ್ಸ್ಗೆ ಸೇರಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗಿದೆ. ಇದು ಕ್ರಿಕೆಟ್ ವಲಯದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ಐಪಿಎಲ್ 2024 ಕ್ಕೆ ಮುಂದಿನ ತಿಂಗಳು ಮಿನಿ ಹರಾಜು ನಡೆಯಲಿದೆ, ಆದರೆ ಇದಕ್ಕೂ ಮೊದಲು, ಪ್ರತಿ ಬಾರಿಯಂತೆ, ಎಲ್ಲಾ 10 ಫ್ರಾಂಚೈಸಿಗಳಿಗೆ ಟ್ರೇಡ್ ವಿಂಡೋ ತೆರೆದಿರುತ್ತದೆ, ಇದರಲ್ಲಿ ಫ್ರಾಂಚೈಸಿ ಪರಸ್ಪರ ಆಟಗಾರರನ್ನು ವಿನಿಮಯ ಮಾಡಿಕೊಳ್ಳಬಹುದು. ಟ್ರೇಡ್ ವಿಂಡೋ ನವೆಂಬರ್ 26 ರಂದು ಕೊನೆಗೊಳ್ಳುತ್ತದೆ.
ಎರಡು ಯಶಸ್ವಿ ಸೀಸನ್ಗಳ ನಂತರ ಹಾರ್ದಿಕ್ ಗುಜರಾತ್ ತೊರೆಯಲು ಕಾರಣ ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಟೈಮ್ಸ್ ಆಫ್ ಇಂಡಿಯಾ ಬಿಸಿಸಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ, ಹಾರ್ದಿಕ್ ಮತ್ತು ಟೀಮ್ ಮ್ಯಾನೇಜ್ಮೆಂಟ್ ನಡುವೆ ಕೆಲಕಾಲಗಳಿಂದ ಭಿನ್ನಾಭಿಪ್ರಾಯವಿತ್ತು, ಹೀಗಾಗಿ ಹಾರ್ದಿಕ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇದರ ನಡುವೆ ಗುಜರಾತ್ ಕೋಚ್ ಆಶೀಶ್ ನೆಹ್ರಾ ಮತ್ತು ಹಾರ್ದಿಕ್ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿದೆಯೇ ಅಥವಾ ಫ್ರಾಂಚೈಸಿ ಜೊತೆಗಿನ ಸಂಬಂಧ ಹದಗೆಟ್ಟಿದೆಯೇ ಎಂಬುದು ಸ್ಪಷ್ಟವಾಗಿಲ್ಲ. 2023ರ ಸೀಸನ್ನಲ್ಲಿಯೇ ಎಲ್ಲವೂ ಸರಿ ಇರಲಿಲ್ಲ, ಕಳೆದ 4 ತಿಂಗಳಲ್ಲಿ ಮುಂಬೈ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಹೇಳಲಾಗಿದೆ.
ಹಾರ್ದಿಕ್ 2021 ರ ಋತುವಿನವರೆಗೆ ಮುಂಬೈನ ಭಾಗವಾಗಿದ್ದರು. ಆದರೆ 2022 ರ ಋತುವಿನ ಮೊದಲು 2 ಹೊಸ ತಂಡಗಳ ಪೈಕಿ ಗುಜರಾತ್ ಟೈಟಾನ್ಸ್ಗೆ ನಾಯಕನಾಗಿ ಆಯ್ಕೆ ಆದರು. ಹಾರ್ದಿಕ್ ನಾಯಕತ್ವದಲ್ಲಿ ಗುಜರಾತ್ ಮೊದಲ ಸೀಸನ್ನಲ್ಲಿಯೇ ಚಾಂಪಿಯನ್ ಆಗಿ ಹೊರಹೊಮ್ಮಿತು. 2023 ರ ಋತುವಿನಲ್ಲಿ, ಫೈನಲ್ಗೆ ತಲುಪಿತ್ತು ಆದರೆ, ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತು.